ಅತ್ಯಾಚಾರದ ವಿರುದ್ಧ ಹೋರಾಟದ ನೇತೃತ್ವ ವಹಿಸಿ: ಪ್ರಧಾನಿ ಮೋದಿಗೆ ನೊಬೆಲ್ ಪ್ರಶಸ್ತಿ ಪುರಸ್ಕೃತ ಸತ್ಯಾರ್ಥಿ ಆಗ್ರಹ

ಹೊಸದಿಲ್ಲಿ,ಅ.3: ಉತ್ತರ ಪ್ರದೇಶದ ಹತ್ರಸ್ ನಲ್ಲಿ 20ರ ಹರೆಯದ ದಲಿತ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ಮತ್ತು ಸಾವಿನ ವಿರುದ್ಧ ದೇಶಾದ್ಯಂತ ಭುಗಿಲೆದ್ದಿರುವ ಪ್ರತಿಭಟನೆಗಳ ನಡುವೆಯೇ ನೊಬೆಲ್ ಪ್ರಶಸ್ತಿ ಪುರಸ್ಕೃತ ಕೈಲಾಶ್ ಸತ್ಯಾರ್ಥಿ ಅವರು, ಮಹಿಳೆಯರು ಮತ್ತು ಮಕ್ಕಳಿಗೆ ಎದುರಾಗಿರುವ ನ್ಯಾಯದ ಬಿಕ್ಕಟ್ಟನ್ನು ಅಂತ್ಯಗೊಳಿಸುವಂತೆ ಹಾಗೂ ಅತ್ಯಾಚಾರದ ವಿರುದ್ಧ ಹೋರಾಟದ ನೇತೃತ್ವವನ್ನು ವಹಿಸಿಕೊಳ್ಳುವಂತೆ ಪ್ರಧಾನಿ ನರೇಂದ್ರ ಮೋದಿಯವರನ್ನು ಆಗ್ರಹಿಸಿದ್ದಾರೆ. ದೇಶಾದ್ಯಂತ ಇಂದು ನಮ್ಮ ಪುತ್ರಿಯರ ಮೇಲೆ ಏನು ನಡೆಯುತ್ತಿದೆಯೋ ಅದು ರಾಷ್ಟ್ರೀಯ ಅವಮಾನವಾಗಿದೆ ಎಂದು ಅವರು ಒತ್ತಿ ಹೇಳಿದ್ದಾರೆ.
ಹತ್ರಸ್ ಘಟನೆ ಮತ್ತು ದೇಶದಲ್ಲಿ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯಗಳ ಇತರ ಪ್ರಕರಣಗಳ ಕುರಿತು ಸುದ್ದಿಸಂಸ್ಥೆಗೆ ಪ್ರತಿಕ್ರಿಯಿಸಿದ ಸತ್ಯಾರ್ಥಿ,‘ಮಹಿಳೆಯರು ಮತ್ತು ಮಕ್ಕಳಿಗೆ ನ್ಯಾಯದ ಬಿಕ್ಕಟ್ಟನ್ನು ನೀವೇ (ಪ್ರಧಾನಿ) ಅಂತ್ಯಗೊಳಿಸಬೇಕು. ಇಡೀ ದೇಶವೇ ಇದಕ್ಕಾಗಿ ನಿಮ್ಮತ್ತ ನೋಡುತ್ತಿದೆ. ಅತ್ಯಾಚಾರದ ವಿರುದ್ಧ ಹೋರಾಟದ ನೇತೃತ್ವವನ್ನು ವಹಿಸಿಕೊಳ್ಳುವಂತೆ ನಾನು ನಿಮ್ಮನ್ನು ಕೋರುತ್ತಿದ್ದೇನೆ. ನಮ್ಮ ಪುತ್ರಿಯರಿಗೆ ನಿಮ್ಮ ಅಗತ್ಯವಿದೆ ಮತ್ತು ನಾವೆಲ್ಲ ನಿಮ್ಮೊಂದಿಗಿದ್ದೇವೆ ’ ಎಂದು ಹೇಳಿದರು.
ಹಿಂಸಾಚಾರದ ಈ ಮನಃಸ್ಥಿತಿಯನ್ನು ಅಂತ್ಯಗೊಳಿಸಲು ಜನತಾ ಆಂದೋಲನಕ್ಕೆ ಕರೆ ನೀಡಿದ ಅವರು,ಅತ್ಯಾಚಾರದ ಸಂಸ್ಕೃತಿಗೆ ಅಂತ್ಯ ಹಾಡಲು ಸಹಾನುಭೂತಿಯ ರಾಜಕೀಯ ಇಚ್ಛಾಶಕ್ತಿ ಮತ್ತು ಜನತೆಯ ಕ್ರಮ ಇವೆರಡೂ ಅಗತ್ಯವಾಗಿವೆ ಎಂದರು.
‘ನಮ್ಮಲ್ಲಿ ಮಾನವೀಯತೆ ಮತ್ತು ಸಹಾನುಭೂತಿಯ ಮೂಲ ಪ್ರಜ್ಞೆಯ ಕೊರತೆಯಿದೆ. ನಮ್ಮ ಪುತ್ರಿಯರನ್ನು ರಕ್ಷಿಸಲು ಮತ್ತು ನಮ್ಮ ಪುತ್ರರನ್ನು ಅವರ ಕೃತ್ಯಗಳಿಗೆ ಹೊಣೆಗಾರರನ್ನಾಗಿಸುವಲ್ಲಿ ನಾವು ವಿಫಲಗೊಂಡಿದ್ದೇವೆ. ನಮ್ಮ ವೈಫಲ್ಯಕ್ಕೆ ಬೆಲೆ ತೆರುವುದನ್ನು ಮುಂದುವರಿಸಲು ನಮ್ಮ ಪುತ್ರಿಯರಿಗಿನ್ನು ಸಾಧ್ಯವಿಲ್ಲ. ಈ ಮನಃಸ್ಥಿತಿಯನ್ನು ಅಂತ್ಯಗೊಳಿಸಲು ಜನತಾ ಆಂದೋಲನ ನಡೆಯಬೇಕಿದೆ’ ಎಂದು ಸತ್ಯಾರ್ಥಿ ಹೇಳಿದರು.







