ಬೈಂದೂರು, ಕುಂದಾಪುರ ರೈಲು ನಿಲ್ದಾಣಗಳಲ್ಲಿ ಮತ್ತೆ ನಿಲುಗಡೆ
ಉಡುಪಿ, ಅ.3: ಕೋವಿಡ್-19 ಸಾಂಕ್ರಾಮಿಕ ರೋಗದ ಕಾರಣಕ್ಕಾಗಿ ಬೈಂದೂರು ಮತ್ತು ಕುಂದಾಪುರ ರೈಲು ನಿಲ್ದಾಣಗಳಲ್ಲಿ ಕೊಂಕಣ ರೈಲ್ವೆ ಮಾರ್ಗದಲ್ಲಿ ಸಂಚರಿಸುವ ಕೆಲವು ರೈಲುಗಳ ನಿಲುಗಡೆಯನ್ನು ರದ್ದುಪಡಿಸಿದ್ದ ರೈಲ್ವೆ ಮಂಡಳಿ, ತಕ್ಷಣದಿಂದ ಜಾರಿಗೊಳ್ಳುವಂತೆ ಅವುಗಳಿಗೆ ಮತ್ತೆ ನಿಲುಗಡೆ ನೀಡಿ ಆದೇಶ ಹೊರಡಿಸಿದೆ.
ಕುಂದಾಪುರ ರೈಲು ನಿಲ್ದಾಣದಲ್ಲಿ 06345 ಲೋಕಮಾನ್ಯ ತಿಲಕ್- ತಿರುವನಂತಪುರಂ ಸೆಂಟ್ರಲ್ ಸ್ಪೆಷಲ್ ಎಕ್ಸ್‌ಪ್ರೆಸ್, 06346 ತಿರುವನಂತಪುರಂ ಸೆಂಟ್ರಲ್- ಲೋಕಮಾನ್ಯ ತಿಲಕ್ ಸ್ಪೆಷಲ್ ಎಕ್ಸ್‌ಪ್ರೆಸ್, 02617 ಎರ್ನಾಕುಲಂ ಜಂಕ್ಷನ್- ಎಚ್.ನಿಜಾಮುದ್ದೀನ್ ಸೂಪರ್‌ಫಾಸ್ಟ್ ಸ್ಪೆಷಲ್ ಹಾಗೂ 02618 ಎಚ್.ನಿಜಾಮುದ್ದೀನ್-ಎರ್ನಾಕುಲಂ ಜಂಕ್ಷನ್ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್‌ಗೆ ನಿಲುಗಡೆ ಇರುತ್ತದೆ.
ಬೈಂದೂರು ಮೂಕಾಂಬಿಕಾ ರೈಲು ನಿಲ್ದಾಣದಲ್ಲಿ 06345 ಲೋಕಮಾನ್ಯ ತಿಲಕ್- ತಿರುವನಂತಪುರಂ ಸೆಂಟ್ರಲ್ ಸ್ಪೆಷಲ್ ಎಕ್ಸ್‌ಪ್ರೆಸ್, 06346 ತಿರುವನಂತಪುರಂ ಸೆಂಟ್ರಲ್- ಲೋಕಮಾನ್ಯ ತಿಲಕ್ ಸ್ಪೆಷಲ್ ಎಕ್ಸ್‌ಪ್ರೆಸ್ ರೈಲಿಗೆ ನಿಲುಗಡೆ ಇರುತ್ತದೆ ಎಂದು ಕೊಂಕಣ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಸುರಕ್ಷತಾ ಅಂತರ ಸೇರಿದಂತೆ ಕೋವಿಡ್-19ಕ್ಕೆ ಕೈಗೊಳ್ಳಬೇಕಾದ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅವರು ಹೇಳಿದ್ದಾರೆ.







