ಅಂತ್ಯಕ್ರಿಯೆ ನಡೆಸಿರುವುದು ನಮ್ಮ ಯುವತಿಯ ಮೃತದೇಹಕ್ಕೆ ಅಲ್ಲ: ಯುವತಿಯ ಅತ್ತೆ ಆರೋಪ
ಹತ್ರಸ್ ಯುವತಿಯ ಅತ್ಯಾಚಾರ, ಕೊಲೆ ಪ್ರಕರಣ

ಲಕ್ನೋ, ಅ. 3: ಉತ್ತರಪ್ರದೇಶ ಪೊಲೀಸರು ಬೇರೊಬ್ಬರ ಮೃತದೇಹದ ಅಂತ್ಯಕ್ರಿಯೆ ನಡೆಸಿದ್ದಾರೆ ಎಂದು ಉತ್ತರಪ್ರದೇಶದ ಹತ್ರರಸ್‌ನಲ್ಲಿ ಪ್ರಬಲ ಠಾಕೂರ್ ಸಮುದಾಯದ ನಾಲ್ವರಿಂದ ಅತ್ಯಾಚಾರ ಹಾಗೂ ಚಿತ್ರಹಿಂಸೆಗೆ ಗುರಿಯಾಗಿ ಮೃತಪಟ್ಟ ದಲಿತ ಯುವತಿಯ ಅತ್ತೆ ಶನಿವಾರ ಆರೋಪಿಸಿದ್ದಾರೆ.
ರಾತ್ರಿ ಯಾರ ಮೃತದೇಹದ ಅಂತ್ಯಕ್ರಿಯೆ ನಡೆಸಲಾಗಿದೆ ಎಂಬುದನ್ನು ಪೊಲೀಸರು ಮೊಟ್ಟ ಮೊದಲು ಸ್ಪಷ್ಟಪಡಿಸಲಿ. ಅದು ನಮ್ಮ ಕುಟುಂಬದ ಯುವತಿಯ ಮೃತದೇಹ ಅಲ್ಲ. ನಾವು ಮೃತದೇಹವನ್ನು ನೋಡಿಲ್ಲ ಎಂದು ಅವರು ಹೇಳಿದ್ದಾರೆ.
ನನ್ನ ಪುತ್ರಿಯ ಸಾವಿನ ಬಳಿಕ ಮೃತದೇಹವನ್ನು ನಮಗೆ ಹಸ್ತಾಂತರಿಸಿಲ್ಲ. ನಾನು ವಿನಂತಿಸಿದರೂ ಆಕೆಯ ಮೃತದೇಹವನ್ನು ನೋಡಲು ಪೊಲೀಸರು ನಮಗೆ ಅವಕಾಶ ನೀಡಲಿಲ್ಲ ಎಂದು ಯುವತಿಯ ತಾಯಿ ಆರೋಪಿಸಿದ್ದಾರೆ. ವಿಶೇಷ ತನಿಖಾ ತಂಡ ಆರೋಪಿಗಳೊಂದಿಗೆ ಶಾಮೀಲಾಗಿದೆ. ಪ್ರಕರಣವನ್ನು ಸಿಬಿಐ ತನಿಖೆ ನಡೆಸುವುದನ್ನು ನಾವು ಬಯಸುವುದಿಲ್ಲ.
ಸುಪ್ರೀಂ ಕೋರ್ಟ್ ಮೇಲ್ವಿಚಾರಣೆಯಲ್ಲಿ ಪ್ರಕರಣದ ತನಿಖೆ ನಡೆಯಬೇಕು ಎಂದು ಯುವತಿಯ ತಾಯಿ ಆಗ್ರಹಿಸಿದ್ದಾರೆ. ಆರೋಪಿಗಳು ಹಾಗೂ ಕುಟುಂಬದವರು ಸೇರಿದಂತೆ ಪ್ರಕರಣದಲ್ಲಿ ಭಾಗಿಯಾದ ಎಲ್ಲರೂ ಸುಳ್ಳು ಪತ್ತೆ ಪರೀಕ್ಷೆಗೆ ಒಳಗಾಗಬೇಕು ಎಂದು ವಿಶೇಷ ತನಿಖಾ ತಂಡ ಹೇಳುತ್ತಿರುವುದು ಯಾಕೆ ? ನಾವು ಎಂದಿಗೂ ನಮ್ಮ ಹೇಳಿಕೆಯನ್ನು ಬದಲಾಯಿಸುವುದಿಲ್ಲ. ಆದುದರಿಂದ ನಾವು ಯಾಕೆ ಸುಳ್ಳು ಪತ್ತೆ ಪರೀಕ್ಷೆಗೆ ಒಳಗಾಗಬೇಕು ? ಎಂದು ಅವರು ಪ್ರಶ್ನಿಸಿದ್ದಾರೆ. ವಿಶೇಷ ತನಿಖಾ ತಂಡದಿಂದ ಯಾರೊಬ್ಬರೂ ಶುಕ್ರವಾರ ನಮ್ಮ ಮನೆಗೆ ಭೇಟಿ ನೀಡಿಲ್ಲ. ಮೊನ್ನೆ ಅವರು ಆಗಮಿಸಿದ್ದರು ಹಾಗೂ ಬೆಳಗ್ಗೆ 9 ಗಂಟೆಯಿಂದ ಅಪರಾಹ್ನ 2.30ರ ವರೆಗೆ ವಿಚಾರಣೆ ನಡೆಸಿದರು. ನಾವು ಮಾಧ್ಯಮದೊಂದಿಗೆ ಮಾತನಾಡುವುದನ್ನು ತಡೆಯಲು ಹೊರಗೆ ಹೋಗದಂತೆ ನಿಷೇಧ ವಿಧಿಸಿದರು. ನಮ್ಮ ಯುವತಿಯ ಮೃತದೇಹವನ್ನು ನಮಗೆ ಯಾಕೆ ತೋರಿಸಿಲ್ಲ ? ಆಡಳಿತದ ಕೈಗೊಂಬೆಯಾಗಿರುವುದರಿಂದ ವಿಶೇಷ ತನಿಖಾ ತಂಡದ ಬಗ್ಗೆ ನಮಗೆ ನಂಬಿಕೆ ಇಲ್ಲ ಎಂದು ಯುವತಿಯ ಅತ್ತೆ ಆರೋಪಿಸಿದ್ದಾರೆ.







