ಮಂಗಳೂರು ದಸರಾ: ಕೊರೋನ ಮಾರ್ಗಸೂಚಿ ಪಾಲಿಸಲು ಡಿಸಿ ಸೂಚನೆ

ಮಂಗಳೂರು, ಅ.3: ಮಂಗಳೂರು ದಸರಾ ಹಬ್ಬದ ಆಚರಣೆ ಹಿನ್ನೆಲೆಯಲ್ಲಿ ಕೊರೋನ ಮಾರ್ಗಸೂಚಿ ಪಾಲಿಸಿ ಉತ್ಸವ ಆಚರಿಸಲು ದ.ಕ. ಜಿಲ್ಲಾಧಿಕಾರಿ ಡಾ. ಕೆ.ವಿ. ರಾಜೇಂದ್ರ ಶನಿವಾರ ಸೂಚನೆ ನೀಡಿದ್ದಾರೆ.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಶನಿವಾರ ನಡೆದ ಜಿಲ್ಲಾ ಧಾರ್ಮಿಕ ಪರಿಷತ್‌ನ ಸಭೆಯಲ್ಲಿ ಮಾರ್ಗಸೂಚಿ ಪಾಲಿಸಿ ಉತ್ಸವ ನಡೆಸಲು ತೀರ್ಮಾನ ಕೈಗೊಳ್ಳಲಾಯಿತು. ದಸರಾ ಹಬ್ಬದಲ್ಲಿ ಹೆಚ್ಚಿನ ಜನಸಂದಣಿ ಸೇರುವ ಪ್ರತಿಯೊಂದು ದೇವಸ್ಥಾನಗಳಲ್ಲಿ ಭಕ್ತಾದಿ ಗಳಿಗೆ ಸ್ಯಾನಿಟೈಸರ್, ಥರ್ಮಲ್ ಸ್ಕಾನಿಂಗ್ ಹಾಗೂ ಮಾಸ್ಕ್ ಧರಿಸುವಿಕೆಯನ್ನು ಕಡ್ಡಾಯ ಮಾಡಬೇಕು ಎಂದು ಡಿಸಿ ತಿಳಿಸಿದ್ದಾರೆ.
ಸಾಂಪ್ರದಾಯಿಕವಾಗಿ ಸಂಘ-ಸಂಸ್ಥೆಗಳು ಶಾರದಾ ಮೂರ್ತಿಗಳಲ್ಲಿಯೂ ರಸ್ತೆಯ ಬದಿ ಅಥವಾ ಇನ್ನಿತರ ಕಡೆ ಪ್ರತಿಷ್ಠಾಪಿಸುವ ಕಡೆಯೂ ಯಾವುದೇ ಸಭಾ ಕಾರ್ಯಕ್ರಮ ಸಾಂಸ್ಕೃತಿಕ ಅವಕಾಶ ನೀಡದಂತೆ ಸರಳವಾಗಿ ಆಚರಿಸಲು ತೀರ್ಮಾನ ಕೈಗೊಳ್ಳಲಾಯಿತು.
ಈ ಬಾರಿಯ ದಸರಾ ಹಬ್ಬದಲ್ಲಿ ಹುಲಿ ವೇಷ ತಂಡಗಳಿಗೆ ಅವಕಾಶ ನಿರ್ಬಂಧಿಸಲಾಗಿದೆ. ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ದೇವಸ್ಥಾನದ ಆವರಣದ ಒಳಗೆ ಸುರಕ್ಷಿತ ಅಂತರದಲ್ಲಿ ಕುರ್ಚಿಗಳನ್ನಿರಿಸಿ, ಸಾಮಾಜಿಕ ಜಾಲತಾಣದಲ್ಲಿ ನೇರಪ್ರಸಾರ ಮಾಡುವು ದಕ್ಕೆ ಅವಕಾಶ ಕಲ್ಪಿಸಲಾಗಿದೆ. ಯಾವುದೇ ದೊಡ್ಡ ಗಾತ್ರದ ಶಾಮಿಯಾನ, ಚಪ್ಪರ ಹಾಕಲು ಅವಕಾಶವಿಲ್ಲ. ಅಲ್ಲದೇ ಹಬ್ಬದಲ್ಲಿ ಜಾತ್ರೆ, ಸಂತೆಗಳಿಗೆ ಅವಕಾಶವಿಲ್ಲ ಎಂದು ಹೇಳಿದ್ದಾರೆ.
ಜನರ ಆರೋಗ್ಯದ ಹಿತದೃಷ್ಟಿಯಿಂದ ಮುಂಬರುವ ದೀಪಾವಳಿ ಹಬ್ಬದಲ್ಲಿ ಸುಡುಮದ್ದು, ಪಟಾಕಿಯ ಶೇಖರಣೆ, ಮಾರಾಟ ಹಾಗೂ ಬಳಕೆಯನ್ನು ಕಟ್ಟುನಿಟ್ಟಾಗಿ ನಿಷೇಧಿಸಬೇಕು ಎಂದು ಸಭೆಯಲ್ಲಿ ತೀರ್ಮಾನ ಕೈಗೊಂಡಿದ್ದಾರೆ.







