ವೈದ್ಯರ ನಿರ್ಲಕ್ಷಕ್ಕೆ ಜೀವ ಬಲಿ ಆರೋಪ: ಹಾಸನ ಜಿಲ್ಲಾಸ್ಪತ್ರೆ, ಡಿಸಿ ಕಚೇರಿ ಮುಂದೆ ಕುಟುಂಬಸ್ಥರ ಪ್ರತಿಭಟನೆ

ಹಾಸನ, ಅ.3: ಚೆನ್ನಾಗಿದ್ದ ವ್ಯಕ್ತಿಗೆ ಕೊರೋನ ಎಂದು ನೆಪಹೇಳಿ ತುರ್ತು ಘಟಕದಲ್ಲಿಟ್ಟು, ವ್ಯಕ್ತಿಯೊಬ್ಬರ ಜೀವ ತೆಗೆದುಕೊಂಡಿದ್ದಾರೆ ಎಂದು ಆರೋಪಿಸಿ ನಗರದ ಜಿಲ್ಲಾ ಸರಕಾರಿ ಆಸ್ಪತ್ರೆ ಮತ್ತು ಜಿಲ್ಲಾಧಿಕಾರಿ ಕಚೇರಿ ಎದುರು ಕುಟುಂಬಸ್ಥರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಚನ್ನರಾಯಪಟ್ಟಣ ತಾಲೂಕಿನ ಎ.ಚೋಳನಹಳ್ಳಿಯಲ್ಲಿ ವಾಸವಾಗಿರುವ ಮಹೇಶ್ (50) ವೈದ್ಯರ ನಿರ್ಲಕ್ಷ್ಯಕ್ಕೆ ಸಾವನಪ್ಪಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಮಹೇಶ್ ರನ್ನು 8 ದಿನಗಳ ಹಿಂದೆ ಹಾಸನ ಜಿಲ್ಲಾ ಸರಕಾರ ಆಸ್ಪತ್ರೆಗೆ ಚಿಕಿತ್ಸೆಗಾಗಿ ಸೇರಿಸಲಾಯಿತು. ಚೆನ್ನಾಗಿಯೇ ಇದ್ದರು. ಆದರೆ ವೈದ್ಯರು ಕೊರೋನ ಇದೆ ಎಂದು ಹೇಳಿದ್ದಾರೆ. ಅವರ ಜೊತೆ ಆರು ಜನರು ಸಂಪರ್ಕದಲ್ಲಿದ್ದೇವೆ. ನಮಗೆ ಬಾರದ ಕೊರೋನ ಅವರಿಗೊಬ್ಬರಿಗೆ ಮಾತ್ರ ಬಂದಿದೆ ಎಂದು ವೈದ್ಯರು ಹೇಳುತ್ತಿದ್ದಾರೆ. ಲಿವರ್ ತೊಂದರೆ ಇರುವ ರೋಗಿ, ತುರ್ತು ಘಟಕಕ್ಕೆ (ಐಸಿಯು) ಕರೆದೊಯ್ಯಬೇಡಿ, ಇಲ್ಲಿ ಆಗದಿದ್ದರೇ ವಾಪಸ್ ಕಳುಹಿಸಿ. ನಾವು ಬೆಂಗಳೂರಿನಲ್ಲಿ ಚಿಕಿತ್ಸೆ ಕೊಡಿಸುವುದಾಗಿ ಮನವಿ ಮಾಡಲಾಯಿತು. ರೋಗಿಯೂ ಕೂಡ ಬೇಡ ಎಂದರೂ ಬಲವಂತವಾಗಿ ಐಸಿಯುಗೆ ಹಾಕಿ ಈಗ ಪ್ರಾಣದ ತೆಗೆದುಕೊಂಡಿದ್ದಾರೆ ಎಂದು ದೂರಿದರು.
ಜಿಲ್ಲಾ ಆರೋಗ್ಯಾಧಿಕಾರಿ ಡಾ. ಸತೀಶ್ ಮತ್ತು ಜಿಲ್ಲಾ ಸರಕಾರಿ ಆಸ್ಪತ್ರೆಯ ಸರ್ಜನ್ ಕೃಷ್ಣಮೂರ್ತಿ ಎದುರು ಈ ವಿಚಾರ ತಿಳಿಸಲಾಯಿತು. ಸ್ಥಳಕ್ಕಾಗಮಿಸಿದ ಜಿಲ್ಲಾ ಪೊಲಿಸ್ ವರಿಷ್ಠಾಧಿಕಾರಿಗಳು ಕೂಡ ಸಮಾಧಾನ ಮಾಡಲು ಮುಂದಾದರು. ಈ ಬಗ್ಗೆ ಸೂಕ್ತ ತನಿಖೆ ಮಾಡಿಸಿ ನ್ಯಾಯ ಕೊಡಿಸುವುದಾಗಿ ಅವರು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಕರ್ನಾಟಕ ಪ್ರಜಾ ಶಕ್ತಿಯ ಜಿಲ್ಲಾಧ್ಯಕ್ಷ ಪ್ರವೀಣ್ ಕುಮಾರ್, ಚಿಕಿತ್ಸೆ ಫಲಕಾರಿಯಾಗದೇ ಸಾವನಪ್ಪಿದ ಮಹೇಶ್ ಪತ್ನಿ ದಿವ್ಯಾ, ಸಹೋದರಿ ಲಕ್ಷ್ಮೀ ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ವೈದ್ಯರ ವಿರುದ್ಧ ಕ್ರಮಕ್ಕೆ ಆಗ್ರಹ
ಒಂದು ಮಾತ್ರೆ ನೀಡದೆ ಹೊಟ್ಟೆಯಲ್ಲಿ, ಬೆನ್ನಲ್ಲಿ ನೀರು ತೆಗೆಯಬೇಕು ಎಂದಿದ್ದಾರೆ. ಅನೇಕ ಬಾರಿ ಸ್ಕ್ಯಾನ್ ಮಾಡಿಸಿ 8 ದಿವಸಗಳಿಂದ ಹಿಂಸೆ ಕೊಟ್ಟಿದ್ದಾರೆ. ಸರಕಾರಿ ಆಸ್ಪತ್ರೆಯಲ್ಲಿ ನಮಗೆ ನ್ಯಾಯ ಸಿಗುವುದಿಲ್ಲ. ಕೋವಿಡ್ ಹೆಸರಿನಲ್ಲಿ ಕೋಟ್ಯಂತರ ರೂ. ಸಂಪಾದನೆ ಮಾಡುತ್ತಿದ್ದಾರೆ. ದುಡ್ಡು ಹೋದರೆ ಹೋಗಲಿ, ಆದರೆ ಹೋದ ಜೀವ ಮತ್ತೆ ಬರುತ್ತದೆಯೇ? ಜೀವ ತೆಗೆದು ಹಣ ಮಾಡುತ್ತಿದ್ದಾರೆ. ಜೀವದ ಜೊತೆ ಚೆಲ್ಲಾಟವಾಡುವ ಬೇಜವಬ್ದಾರಿ ವೈದ್ಯರು ಮತ್ತು ಸಿಬ್ಬಂದಿಯ ವಿರುದ್ಧ ಕಾನೂನು ಕ್ರಮಕೈಗೊಂಡು ನ್ಯಾಯ ದೊರಕಿಸಿಕೊಡುವಂತೆ ಸಾವನ್ನಪ್ಪಿದ ಮಹೇಶ್ ಕುಟುಂಬಸ್ಥರು ಮನವಿ ಮಾಡಿದರು.







