ಗ್ರಾಪಂ ಚುನಾವಣೆ: ಕಾಂಗ್ರೆಸ್ ಸಮಿತಿಗಳಿಗೆ ಉಸ್ತುವಾರಿ ನೇಮಕ
ಮಂಗಳೂರು, ಅ.3: ಮುಂದಿನ ಗ್ರಾಮ ಪಂಚಾಯತ್ ಚುನಾವಣೆಗೆ ದ.ಕ. ಜಿಲ್ಲಾ ಕಾಂಗ್ರೆಸ್ ಸಮಿತಿಯಿಂದ ಕಾಂಗ್ರೆಸ್ ಮುಖಂಡರನ್ನು ವಿವಿಧ ವಿಧಾನಸಭಾ ಕ್ಷೇತ್ರ ಹಾಗೂ ಬ್ಲಾಕ್ ಕಾಂಗ್ರೆಸ್ ಸಮಿತಿಗೆ ಉಸ್ತುವಾರಿಗಳಾಗಿ ನೇಮಕಗೊಳಿಸಿ ದ.ಕ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಹರೀಶ್ ಕುಮಾರ್ ಶನಿವಾರ ಆದೇಶ ಹೊರಡಿಸಿದ್ದಾರೆ.
ಮಾಜಿ ಶಾಸಕ ಜೆ.ಆರ್.ಲೋಬೊ ಅವರಿಗೆ ಸುಳ್ಯ ಮತ್ತು ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ, ವಿಧಾನ ಪರಿಷತ್ ಮಾಜಿ ಸದಸ್ಯ ಐವನ್ ಡಿಸೋಜ ಅವರಿಗೆ ಬಂಟ್ವಾಳ, ಪುತ್ತೂರು ಮತ್ತು ಮಂಗಳೂರು (ಉಳ್ಳಾಲ) ವಿಧಾನ ಸಭಾ ಕ್ಷೇತ್ರ, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಅವರಿಗೆ ಮಂಗಳೂರು ಉತ್ತರ ಮತ್ತು ಮೂಡುಬಿದಿರೆ ವಿಧಾನಸಭಾ ಕ್ಷೇತ್ರ ನೀಡಲಾಗಿದೆ.
ಮಾಜಿ ಮನಪಾ ಸದಸ್ಯ ಪ್ರಕಾಶ್ ಸಾಲಿಯಾನ್ ಅವರಿಗೆ ಸುಳ್ಯ ಬ್ಲಾಕ್, ಮಂಗಳೂರು ದಕ್ಷಿಣ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಜೆ.ಅಬ್ದುಲ್ ಸಲೀಂ ಅವರಿಗೆ ಕಡಬ ಬ್ಲಾಕ್, ಮಂಗಳೂರು ನಗರ ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ಗಿರೀಶ್ ಶೆಟ್ಟಿ ಅವರಿಗೆ ಪುತ್ತೂರು ಬ್ಲಾಕ್, ಮನಪಾ ಸದಸ್ಯ ಅಬ್ದುಲ್ ಲತೀಫ್ ಅವರಿಗೆ ವಿಟ್ಲ ಬ್ಲಾಕ್, ಮಾಜಿ ಮೇಯರ್ ಶಶಿಧರ್ ಹೆಗ್ಡೆ ಅವರಿಗೆ ಬಂಟ್ವಾಳ ಬ್ಲಾಕ್, ಮನಪಾ ವಿರೋಧ ಪಕ್ಷದ ನಾಯಕ ಅಬ್ದುಲ್ ರವೂಫ್ ಅವರಿಗೆ ಪಾಣೆಮಂಗಳೂರು ಬ್ಲಾಕ್‌ಗೆ ಉಸ್ತುವಾರಿಯಾಗಿ ನೇಮಿಸಲಾಗಿದೆ.
ಮಂಗಳೂರು ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿಶ್ವಾಸ್ ಕುಮಾರ್ ದಾಸ್ ಅವರಿಗೆ ಬೆಳ್ತಂಗಡಿ ನಗರ ಬ್ಲಾಕ್, ಸುರತ್ಕಲ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದಾಶಿವ ಶೆಟ್ಟಿ ಅವರಿಗೆ ಬೆಳ್ತಂಗಡಿ ಗ್ರಾಮೀಣ ಬ್ಲಾಕ್, ಮನಪಾ ಸದಸ್ಯ ಪ್ರವೀಣ್ ಚಂದ್ರ ಆಳ್ವ ಅವರಿಗೆ ಮೂಡುಬಿದಿರೆ ಬ್ಲಾಕ್, ಮನಪಾ ಮಾಜಿ ಸದಸ್ಯ ದೀಪಕ್ ಪೂಜಾರಿ ಅವರಿಗೆ ಮುಲ್ಕಿ ಬ್ಲಾಕ್, ಮನಪಾ ಮಾಜಿ ಉಪಮೇಯರ್ ಮುಹಮ್ಮದ್ ಕುಂಜತ್ತಬೈಲ್ ಅವರಿಗೆ ಗುರುಪುರ ಬ್ಲಾಕ್, ದ.ಕ. ಜಿಲ್ಲಾ ಕಾಂಗ್ರೆಸ್ ಸಮಿತಿ ಉಪಾಧ್ಯಕ್ಷ ಪ್ರಸಾದ್ ರಾಜ್ ಕಾಂಚನ್ ಅವರಿಗೆ ಉಳ್ಳಾಲ ಬ್ಲಾಕ್, ಮನಪಾ ಮಾಜಿ ಮೇಯರ್ ಭಾಸ್ಕರ್ ಮೊಯ್ಲಿ ಅವರಿಗೆ ಮುಡಿಪು ಬ್ಲಾಕ್ ನೀಡಲಾಗಿದೆ.
ಕೋರ್ ಕಮಿಟಿ ರಚನೆ: ಪಕ್ಷದ ತುರ್ತು ಮತ್ತು ಪ್ರಮುಖ ವಿಚಾರಗಳ ಬಗ್ಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲು ದ.ಕ. ಜಿಲ್ಲಾ ಕಾಂಗ್ರೆಸ್ ಸಮಿತಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆದೇಶದಂತೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಅವರು ಕೋರ್ ಕಮಿಟಿ ರಚಿಸಿದ್ದಾರೆ.
ಕೋರ್ ಕಮಿಟಿ ಅಧ್ಯಕ್ಷರಾಗಿ ದ.ಕ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಹರೀಶ್ ಕುಮಾರ್, ಸದಸ್ಯರಾಗಿ ಮಾಜಿ ಸಚಿವ ಬಿ.ರಮಾನಾಥ ರೈ, ಶಾಸಕ ಯು.ಟಿ.ಖಾದರ್, ಮಾಜಿ ಸಚಿವ ಅಭಯಚಂದ್ರ ಜೈನ್, ಮಾಜಿ ಸಂಸದೀಯ ಕಾರ್ಯದರ್ಶಿ ಶಕುಂತಲಾ ಶೆಟ್ಟಿ, ಮಾಜಿ ಶಾಸಕ ಕೆ.ವಸಂತ ಬಂಗೇರ, ಮಾಜಿ ಶಾಸಕ ಜೆ.ಆರ್.ಲೋಬೊ, ವಿಧಾನ ಪರಿಷತ್ ಮಾಜಿ ಸದಸ್ಯ ಐವನ್ ಡಿಸೋಜ, ಮಾಜಿ ಶಾಸಕ ಮೊಯ್ದೀನ್ ಬಾವ, ಮಿಥುನ್ ರೈ ಅವರನ್ನು ನೇಮಿಸಲಾಗಿದೆ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಕೆ.ಹರೀಶ್ ಕುಮಾರ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.







