ಹತ್ರಸ್ ದಲಿತ ಯುವತಿಯ ಸಾಮೂಹಿಕ ಅತ್ಯಾಚಾರ ಪ್ರಕರಣ: ಡಬ್ಲ್ಯೂಐಎಂನಿಂದ ಪ್ರತಿಭಟನೆ

ಮಂಗಳೂರು, ಅ.3: ಉತ್ತರ ಪ್ರದೇಶದ ಹತ್ರಸ್ ನಲ್ಲಿ ನಡೆದ ಸಾಮೂಹಿಕ ಅತ್ಯಾಚಾರ-ಕೊಲೆ ಪ್ರಕರಣವನ್ನು ಖಂಡಿಸಿ ವುಮೆನ್ ಇಂಡಿಯಾ ಮೂವ್‌ಮೆಂಟ್ (ಡಬ್ಲ್ಯೂಐಎಂ) ದ.ಕ. ಜಿಲ್ಲಾ ಸಮಿತಿಯಿಂದ ಮಂಗಳೂರು ನಗರದ ಮಿನಿ ವಿಧಾನಸೌಧದ ಎದುರು ಶನಿವಾರ ಪ್ರತಿಭಟನೆ ಹಮ್ಮಿಕೊಳ್ಳಲಾಯಿತು.
ವುಮೆನ್ ಇಂಡಿಯ ಮೂವ್‌ಮೆಂಟ್‌ನ ಜಿಲ್ಲಾಧ್ಯಕ್ಷೆ ನಸ್ರಿಯಾ ಬೆಳ್ಳಾರೆ ಮಾತನಾಡಿ, ಘಟನೆಯಲ್ಲಿ ಅತ್ಯಾಚಾರ ಸಂತ್ರಸ್ತೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾಳೆ. ಆಕೆಯ ಮೃತದೇಹವನ್ನು ನೋಡಲು ಕೂಡ ಹೆತ್ತವರಿಗೆ ಅನುಮತಿಸಲಾಗಿಲ್ಲ. ಪ್ರತಿಭಟಿಸಿದ್ದಕ್ಕಾಗಿ ಕುಟುಂಬವನ್ನು ಕುಟುಂಬವನ್ನು ಬಂಧನದಲ್ಲಿರಿಸಿ ಅಲ್ಲಿನ ಪೊಲೀಸರೇ ಅಂತ್ಯಸಂಸ್ಕಾರ ನಡೆಸಿದ್ದಾರೆ. ಇದು ಸ್ಪಷ್ಟ ಮಾನವ ಹಕ್ಕು ಉಲ್ಲಂಘನೆಯಾಗಿದೆ ಎಂದರು.
ಅತ್ಯಂತ ಕ್ರೂರಿ ಮತ್ತು ಪೈಶಾಚಿಕ ಮನೋಸ್ಥಿತಿಯ ಯೋಗಿ ಆದಿತ್ಯನಾಥ್ ಆಳ್ವಿಕೆ ನಡೆಸುತ್ತಿರುವ ಉತ್ತರಪ್ರದೇಶದಲ್ಲಿ ಬೇರೇನೂ ನಿರೀಕ್ಷಿಸುವುದು ಸಾಧ್ಯವಿಲ್ಲ. ಭಾರತದಲ್ಲಿ ಮಹಿಳೆಯರ ವಿರುದ್ಧ ನಡೆಯುವ ಅಪರಾಧ ಪ್ರಕರಣದಲ್ಲಿ ಶೇ.7.3ರಷ್ಟು ಹೆಚ್ಚಳವಾಗಿದೆ. ಅದರಲ್ಲಿ ಉತ್ತರಪ್ರದೇಶ ಅಗ್ರಸ್ಥಾನದಲ್ಲಿದೆ ಎಂದು ಹೇಳಿದರು.
ಉತ್ತರಪ್ರದೇಶದಲ್ಲಿ ಕಳೆದ ಎರಡು ದಿನಗಳಲ್ಲಿ 18 ಅತ್ಯಾಚಾರ ಪ್ರಕರಣಗಳು ನಡೆದಿವೆ. ದೇಶದಲ್ಲಿ ಪ್ರತಿದಿನ 87 ಅತ್ಯಾಚಾರ ಪ್ರಕರಣ ದಾಖಲಾಗುತ್ತಿವೆ. ಪ್ರತಿ 15 ನಿಮಿಷಕ್ಕೊಂದರಂತೆ ಘಟನೆಗಳು ನಡೆಯುತ್ತಿವೆ. ಪೊಕ್ಸೊ ಕಾಯ್ದೆಯಡಿ ದಾಖಲಾದ ಪ್ರಕರಣದಲ್ಲೂ ಉತ್ತರಪ್ರದೇಶ ಅಗ್ರಸ್ಥಾನದಲ್ಲಿದೆ. ಮಹಿಳೆಯರಿಗೆ ಅತ್ಯಂತ ಅಪಾಯಕಾರಿ ದೇಶಗಳ ಪೈಕಿ ಭಾರತವು ಮೊದಲ ಸ್ಥಾನದಲ್ಲಿದೆ ಎಂದು ತಿಳಿಸಿದರು.
ಎನ್‌ಡಬ್ಲೂಎಫ್ ಜಿಲ್ಲಾಧ್ಯಕ್ಷೆ ಸಮೀಮಾ ಮಂಚಿ ಮಾತನಾಡಿದರು. ವಿಮ್ ದ.ಕ. ಜಿಲ್ಲಾ ಕಾರ್ಯದರ್ಶಿ ಝಹನಾ ಬಂಟ್ವಾಳ ಸ್ವಾಗತಿಸಿದರು. ಸಮಿತಿ ಸದಸ್ಯೆ ಝುಲೈಕಾ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.








