ಅತ್ಯಧಿಕ ತಾಪಮಾನಕ್ಕೆ ಸಾಕ್ಷಿಯಾದ ಅಂಟಾರ್ಕ್ಟಿಕ್ನ ಪರ್ಯಾಯ ದ್ವೀಪ

ಸಾಂದರ್ಭಿಕ ಚಿತ್ರ
ಸ್ಯಾಂಟಿಯಾಗೊ, ಅ.2: ಅಂಟಾರ್ಕ್ಟಿಕ್ ಪರ್ಯಾಯ ದ್ವೀಪವು 2020ರಲ್ಲಿ ಕಳೆದ ಮೂರು ದಶಕಗಳಲ್ಲೇ ಅತ್ಯಧಿಕ ತಾಪಮಾನಕ್ಕೆ ಸಾಕ್ಷಿಯಾಗಿದೆ ಎಂದು ಚಿಲಿಯ ಸ್ಯಾಂಟಿಯಾಗೊ ವಿಶ್ವವಿದ್ಯಾನಿಲಯವು ನಡೆಸಿದ ಅಧ್ಯಯನ ವರದಿಯೊಂದು ತಿಳಿಸಿದೆ.
ಅಂಟಾರ್ಕ್ಟಿಕ್ ಪರ್ಯಾಯ ದ್ವೀಪದಲ್ಲಿ ಜನವರಿ ಹಾಗೂ ಆಗಸ್ಟ್ ತಿಂಗಳ ಮಧ್ಯೆ ತಾಪಮಾನವು 2 ಹಾಗೂ 3 ಡಿಗ್ರಿ ಸೆಲ್ಸಿಯಸ್ ಮಧ್ಯದ ತನಕ (35.6 ಹಾಗೂ 37.4 ಡಿಗ್ರಿ ಫ್ಯಾರನ್ಹೀಟ್) ತಲುಪಿದೆ ಎಂದು ಅಂಟಾರ್ಕ್ಟಿಕ್ನ ಕಿಂಗ್ಜಾರ್ಜ್ ದ್ವೀಪದಲ್ಲಿರುವ ಚಿಲಿಯ ವಾಯುಪಡೆ ನೆಲೆಯಲ್ಲಿ ಅಧ್ಯಯನ ನಡೆಸಿದ ಸಂಶೋಧಕರ ತಂಡವು ತಿಳಿಸಿದೆ. ಅಂಟಾರ್ಕ್ಟಿಕ್ ಪರ್ಯಾಯ ದ್ವೀಪವು ಅಂಟಾಕ್ಟಿಕಾ ಮುಖ್ಯಭೂಮಿಯ ಅತ್ಯಂತ ಉತ್ತರದ ಭಾಗದಲ್ಲಿದೆ.
ಅಂಟಾರ್ಕ್ಟಿಕ ಪರ್ಯಾಯ ದ್ವೀಪದಲ್ಲಿ ಅತ್ಯಂತ ಉತ್ತರದ ತುದಿಯಲ್ಲಿ ಸರಾಸರಿ ಗರಿಷ್ಠ ತಾಪಮಾನವು ಈ ವರ್ಷ 0 ಡಿಗ್ರಿ ಸೆಲ್ಸಿಯಸ್ಗಿಂತ ಅಧಿಕವಾಗಿದೆ. ಇಷ್ಟೊಂದು ತಾಪಮಾನದ ಏರಿಕೆ ಕಳೆದ 31 ವರ್ಷಗಳಲ್ಲೇ ಸಂಭವಿಸಿರಲಿಲ್ಲವೆಂದು ಚಿಲಿಯ ಅಂಟಾಕ್ಟಿಕ ಸಂಸೋಧನಾ ಸಂಸ್ಥೆ(ಎನ್ಎಸಿಎಚ್)ನ ಹವಾಮಾನ ತಜ್ಞ ರೌಲ್ ಕೊರ್ಡೆರೊ ತಿಳಿಸಿದ್ದಾರೆ.





