ಚೆನ್ನೈ ಗೆ ಸತತ 3ನೇ ಸೋಲು
ದುಬೈ,: ಐಪಿಎಲ್ನ 13ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಸನ್ರೈಸರ್ಸ್ ಹೈದರಾಬಾದ್ ವಿರುದ್ಧ 7 ರನ್ನಿಂದ ಸೋಲುಂಡಿದೆ. ಇದು ಟೂರ್ನಿಯಲ್ಲಿ ಧೋನಿ ಬಳಗದ ಸತತ ಮೂರನೇ ಸೋಲಾಗಿದೆ.
ಶುಕ್ರವಾರ ಗೆಲ್ಲಲು 165 ರನ್ ಬೆನ್ನಟ್ಟಿದ ಚೆನ್ನೈಗೆ ಕೊನೆಯ ಓವರ್ನಲ್ಲಿ 28 ರನ್ ಅಗತ್ಯವಿತ್ತು. ಆದರೆ ಚೆನ್ನೈ ತಂಡ ಲೆಗ್ಸ್ಪಿನ್ನರ್ ಅಬ್ದುಲ್ ಸಮದ್ ವಿರುದ್ಧ 20 ರನ್ ಗಳಿಸಲಷ್ಟೇ ಶಕ್ತವಾಗಿ ಸೋಲೊಪ್ಪಿಕೊಂಡಿತು. ಎಂ.ಎಸ್. ಧೋನಿ(ಔಟಾಗದೆ 47, 36 ಎಸೆತ)ಹಾಗೂ ರವೀಂದ್ರ ಜಡೇಜ(50,35 ಎಸೆತ)ತಂಡಕ್ಕೆ ಗೆಲುವು ತಂದುಕೊಡಲು ಪ್ರಯತ್ನಿಸಿದರು. ಅಗ್ರ ಕ್ರಮಾಂಕದ ವೈಫಲ್ಯವು ದುಬಾರಿಯಾಗಿ ಪರಿಣಮಿಸಿತು.
ಚೆನ್ನೈ 42 ರನ್ಗೆ 4 ವಿಕೆಟ್ ಕಳೆದುಕೊಂಡಿದ್ದಾಗ ಜೊತೆಯಾದ ಧೋನಿ ಹಾಗೂ ಜಡೇಜ ಕಠಿಣ ಸವಾಲು ಎದುರಿಸಬೇಕಾಯಿತು. ಸ್ಪಿನ್ನರ್ರಶೀದ್ ವಿರುದ್ಧ ಎಚ್ಚರಿಕೆಯಿಂದ ಬ್ಯಾಟಿಂಗ್ ಮಾಡಿದರು. ರಶೀದ್ ಸ್ಪೆಲ್ ಮುಗಿದಾಗ ಚೆನ್ನೈಗೆ 24 ಎಸೆತಗಳಲ್ಲಿ 78 ರನ್ ಅಗತ್ಯವಿತ್ತು. ಜಡೇಜ 17ನೇ ಓವರ್ನಲ್ಲಿ ಭುವನೇಶ್ವರ ಬೌಲಿಂಗ್ನಲ್ಲಿ 3 ಬೌಂಡರಿ ಹಾಗೂ 18ನೇ ಓವರ್ನಲ್ಲಿ ನಟರಾಜ್ ಎಸೆತದಲ್ಲಿ ಸಿಕ್ಸರ್ ಸಿಡಿಸಿ ಅರ್ಧಶತಕ ಪೂರೈಸಿದರು.ಆದರೆ, ಜಡೇಜಗೆ ಗೆಲುವು ತಂದುಕೊಡಲು ಸಾಧ್ಯವಾಗಲಿಲ್ಲ. ಪ್ರಿಯಂ ಗರ್ಗ್(ಔಟಾಗದೆ 51, 26 ಎಸೆತ), ಅಭಿಷೇಕ್ ಶರ್ಮಾ(31,24 ಎಸೆತ) ಹಾಗೂ ರಶೀದ್ ಖಾನ್(4-0-12-0)ಹೈದರಾಬಾದ್ ಗೆಲುವಿಗೆ ಪ್ರಮುಖ ಕಾಣಿಕೆ ನೀಡಿದರು.