ಹತ್ರಸ್: ಆರೋಪಿಗಳನ್ನು ಬೆಂಬಲಿಸಿ,ನ್ಯಾಯಕ್ಕಾಗಿ ಆಗ್ರಹಿಸಿ ಸಭೆ!

ಹೊಸದಿಲ್ಲಿ, ಅ.4:ದೇಶಾದ್ಯಂತ ಆಕ್ರೋಶಕ್ಕೆ ಕಾರಣವಾಗಿರುವ 20 ವರ್ಷದ ದಲಿತ ಯುವತಿಯ ಸಾಮೂಹಿಕ ಅತ್ಯಾಚಾರ ಹಾಗೂ ಕೊಲೆಯ ಆರೋಪದಡಿ ಬಂಧಿಸಲ್ಪಟ್ಟಿರುವ ಆರೋಪಿಗಳನ್ನು ಬೆಂಬಲಿಸಿ ಹತ್ರಸ್‌ನಲ್ಲಿ ಮೇಲ್ಜಾತಿಯವರೆಂದು ಕರೆಯಲ್ಪಡುವ ಸದಸ್ಯರು ಸಭೆ ನಡೆಸುತ್ತಿದ್ದಾರೆ. ಬಿಜೆಪಿ ನಾಯಕ ರಾಜ್ವೀರ್ ಸಿಂಗ್ ಪೆಹೆಲ್ವಾನ್ ಅವರ ಮನೆಯಲ್ಲಿ ಸಭೆ ನಡೆಯುತ್ತಿದ್ದು, ವೈಯಕ್ತಿಕ ಸಾಮರ್ಥ್ಯದಲ್ಲಿ ಸಭೆಯಲ್ಲಿ ಭಾಗಿಯಾಗಿದ್ದಾಗಿ ಅವರು ಹೇಳಿದ್ದಾರೆ.
ಹತ್ರಸ್‌ನ ದಲಿತ ಯುವತಿ ಸೆ.29ರಂದು ದಿಲ್ಲಿಯ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದು, ಜಿಲ್ಲಾಡಳಿತವು ರಾತ್ರೋರಾತ್ರಿ ಯುವತಿಯ ಕುಟುಂಬಕ್ಕೆ ಮಾಹಿತಿ ನೀಡದೇ ಶವವನ್ನು ಸುಟ್ಟುಹಾಕಿದ್ದರು. ಪ್ರಕರಣವನ್ನು ನಿರ್ವಹಿಸಿರುವ ಪೊಲೀಸರ ಬಗ್ಗೆ ಆಕ್ರೋಶ ವ್ಯಕ್ತವಾಗಿದೆ.
"ನಾವು ಸಭೆಯ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದೇವೆ. ಸಂತ್ರಸ್ತ ಕುಟುಂಬದ ವಿರುದ್ಧವೂ ಮೊದಲ ಮಾಹಿತಿ ವರದಿ(ಎಫ್‌ಐಆರ್)ಸಲ್ಲಿಸಬೇಕು. ಆರೋಪಿಗಳನ್ನು ತಪ್ಪಾಗಿ ಗುರಿ ಮಾಡಲಾಗಿದೆ'' ಎಂದು ಸಭೆಯ ಸಂಘಟಕರೊಬ್ಬರು ತಿಳಿಸಿದ್ದಾರೆ.
ಯುವತಿ ವಾಸಿಸುತ್ತಿದ್ದ ಹಳ್ಳಿಯ ಬಳಿ ಶುಕ್ರವಾರವೂ ಮೇಲ್ಜಾತಿಯ ಪುರುಷರು ಸಭೆ ನಡೆಸಿದ್ದರು. ಯುವತಿಯ ವಿರುದ್ಧ ಕ್ರೌರ್ಯವನ್ನು ವಿರೋಧಿಸಿ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿರುವ ಕಾರಣ ಜಿಲ್ಲೆಯಲ್ಲಿ ಹೆಚ್ಚು ಜನರ ಸೇರುವುದನ್ನು ನಿಷೇಧಿಸಲಾಗಿದೆ. ಆದಾಗ್ಯೂ ಆರೋಪಿಗಳನ್ನು ಬೆಂಬಲಿಸಿ ಸಭೆ ನಡೆಸಲಾಗುತ್ತಿದೆ.







