ಬಿಹಾರ ಚುನಾವಣೆ: ಎಲ್ ಜೆಪಿ ಏಕಾಂಗಿ ಸ್ಪರ್ಧೆ
ಜೆಡಿಯು ಸಖ್ಯ ತೊರೆದ ಚಿರಾಗ್ ಪಾಸ್ವಾನ್ ಪಕ್ಷ

ಹೊಸದಿಲ್ಲಿ, ಅ.4: ಮುಂಬರುವ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಚಿರಾಗ್ ಪಾಸ್ವಾನ್ ನೇತೃತ್ವದ ಲೋಕ ಜನಶಕ್ತಿ ಪಕ್ಷ( ಎಲ್ ಜೆಪಿ) ಆಡಳಿತಾರೂಢ ನಿತೀಶ್ ಕುಮಾರ್ ನೇತೃತ್ವದ ಜೆಡಿಯು ಜೊತೆಗೆ ಸ್ಪರ್ಧಿಸದೆ ಏಕಾಂಗಿಯಾಗಿ ಸ್ಪರ್ಧಿಸಲು ನಿರ್ಧರಿಸಿದೆ. ರವಿವಾರ ಸಂಜೆ ನಡೆದ ಪಕ್ಷದ ಸಭೆಯ ಬಳಿಕ ಈ ವಿಚಾರವನ್ನು ಘೋಷಿಸಲಾಗಿದೆ.
ಬಿಜೆಪಿಯ ಪ್ರಮುಖ ಮೈತ್ರಿ ಪಕ್ಷವಾಗಿರುವ ಎಲ್ ಜೆಪಿ ನಿತೀಶ್ ಕುಮಾರ್ ನಾಯಕತ್ವದ ಜೆಡಿಯು ವಿರುದ್ಧ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದೆ. ಆದಾಗ್ಯೂ ಬಿಜೆಪಿ-ಎಲ್ ಜೆಪಿಯೊಂದಿಗಿನ ಸಹಯೋಗ ಮುಂದುವರಿಯಲಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಜೆಡಿಯುನೊಂದಿಗೆ ರಾಜ್ಯಮಟ್ಟದಲ್ಲಿ ಉಂಟಾಗಿರುವ ಸೈದ್ದಾಂತಿಕ ಭಿನ್ನಮತದಿಂದಾಗಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಎಲ್ ಜೆಪಿ ಪ್ರತ್ಯೇಕವಾಗಿ ಸ್ಪರ್ಧಿಸಲು ನಿರ್ಧರಿಸಿದೆ. ಬಿಹಾರ ಫಸ್ಟ್-ಬಿಹಾರ ಫಸ್ಟ್ ಪಕ್ಷದ ಧ್ಯೇಯ ವಾಕ್ಯವಾಗಿದೆ ಎಂದು ಎಲ್ ಜೆಪಿಯ ಅಬ್ದುಲ್ ಖಲಿಖ್ ಪ್ರಕಟನೆಯೊಂದರಲ್ಲಿ ತಿಳಿಸಿದ್ದಾರೆ.
ಜೆಡಿಯುನೊಂದಿಗೆ ಹಲವು ಕ್ಷೇತ್ರಗಳಲ್ಲಿ ಸೈದ್ದಾಂತಿಕ ಭಿನ್ನಾಭಿಪ್ರಾಯವಿದೆ.ನಮ್ಮ ಅಭ್ಯರ್ಥಿ ಯಾರೆಂದು ನಿರ್ಧಿರಿಸಲು ಜನರು ಸಮರ್ಥರಿದ್ದಾರೆ, ಎಲ್ ಜೆಪಿ ಬಿಹಾರ ನೋಟವಿರುವ ದಾಖಲೆಯನ್ನು ಜಾರಿಗೊಳಿಸಲು ಬಯಸುತ್ತದೆ. ಎರಡೂ ಪಕ್ಷಗಳು ಇದರ ಬಗ್ಗೆ ಒಮ್ಮತಕ್ಕೆ ಬರಲು ಸಾಧ್ಯವಾಗಿಲ್ಲ ಎಂದು ಪಕ್ಷ ಪ್ರಕಟನೆಯೊಂದರಲ್ಲಿತಿಳಿಸಿದೆ.







