ಅಮ್ಟಾಡಿ ವ್ಯ.ಸೇ. ಸಹಕಾರಿ ಸಂಘದ ನೂತನ ಶಾಖೆ ಶುಭಾರಂಭ

ಬಂಟ್ವಾಳ, ಅ.4: ಸಹಕಾರಿ ಸಂಘಗಳು ಇಂದು ರೈತರ ಹಿತಕ್ಕಾಗಿ ಉತ್ತಮ ಕೆಲಸ ಮಾಡುತ್ತಿದ್ದು ಕೊರೋನ ಸಂಕಷ್ಟಗಳಿಂದ ದೇಶದಲ್ಲಿ ಆರ್ಥಿಕ ವ್ಯವಸ್ಥೆ ಕುಸಿದು ಬಿದ್ದಿದ್ದರೂ ದ.ಕ. ಜಿಲ್ಲೆಯ ಸಹಕಾರಿ ಸಂಘಗಳು ಯಾವುದೇ ಸಮಸ್ಯೆಗಳಿಲ್ಲದೆ ಸದೃಢವಾಗಿದೆ. ಇದಕ್ಕೆ ಸಹಕಾರಿ ಸಂಘಗಳನ್ನು ಕಟ್ಟಿರುವ ನಮ್ಮ ಹಿರಿಯರ ಮಾದರಿ ಕಾರ್ಯಗಳು ಕಾರಣವಾಗಿದೆ ಎಂದು ಮಾಜಿ ಸಚಿವ ಬಿ.ರಮಾನಾಥ ರೈ ತಿಳಿಸಿದರು.
ಬಂಟ್ವಾಳಕ್ಕೆ ಸಮೀಪದ ಲೊರೆಟ್ಟೋ ಸಂತ ಅಂತೋನಿ ವಾಣಿಜ್ಯ ಸಂಕೀರ್ಣದಲ್ಲಿ ಶುಭಾರಂಭಗೊಂಡ ಅಮ್ಟಾಡಿ ವ್ಯವಸಾಯ ಸೇವಾ ಸಹಕಾರಿ ಸಂಘ ಇದರ ನೂತನ ಲೊರೆಟ್ಟೋ ನೂತನ ಶಾಖೆಯನ್ನು ರವಿವಾರ ಉದ್ಘಾಟಿಸಿ ಬಳಿಕ ನಡೆದ ಸಮಾರಂಭದಲ್ಲಿ ಅವರು ಮಾತನಾಡಿದರು.
ಸಹಕಾರಿ ಕ್ಷೇತ್ರದಲ್ಲಿ ರಾಜಕೀಯ ನುಸುಳಬಾರದು ಎಂಬುದು ನಮ್ಮ ಆಶಯ. ರಾಜಕೀಯ ರಹಿತವಾಗಿ ನಡೆಯಬೇಕಾದ ಸಹಕಾರಿ ಸಂಘಸಂಸ್ಥೆಗಳಲ್ಲಿ ಇಂದು ಇರುವಷ್ಟು ರಾಜಕೀಯ ಬೇರೆ ಯಾವ ಕ್ಷೇತ್ರದಲ್ಲೂ ಇಲ್ಲ ಇದು ಖೇದಕರವಾಗಿದೆ ಎಂದರು.
ಭದ್ರತಾ ಕೊಠಡಿಯನ್ನು ಜಿ.ಪಂ. ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ಉದ್ಘಾಟಿಸಿ ಶುಭಹಾರೈಸಿದರು. ದ.ಕ. ಜಿಲ್ಲಾ ಸಹಕಾರಿ ಸಂಘಗಳ ಉಪ ನಿಬಂಧಕ ಪ್ರವೀಣ್ ಬಿ. ನಾಯಕ್ ಮಾತನಾಡಿದರು. ಸಂಘದ ಅಧ್ಯಕ್ಷೆ ಮಲ್ಲಿಕಾ ವಿ. ಶೆಟ್ಟಿ ಸಭಾಧ್ಯಕ್ಷತೆ ವಹಿಸಿದ್ದರು. ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು, ಬಂಟ್ವಾಳ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ದೇವದಾಸ ಶೆಟ್ಟಿ ಅಗಮಿಸಿ ನೂತನ ಶಾಖೆಗೆ ಶುಭಹಾರೈಸಿದರು.
ಲೊರೆಟ್ಟೊ ಚರ್ಚಿನ ಧರ್ಮ ಗುರು ವಂದನೀಯ ಫ್ರಾನ್ಸಿಸ್ ಕ್ರಾಸ್ತಾ ಆಶಿರ್ವಚನ ನೀಡಿದರು. ಪುರಸಭಾ ಸದಸ್ಯ ವಾಸು ಪೂಜಾರಿ, ಯುವ ಉದ್ಯಮಿ ಅಹ್ಮದ್ ಬಾವ, ಸಹಕಾರ ಅಭಿವೃದ್ಧಿ ಅಧಿಕಾರಿ ತ್ರಿವೇಣಿ ರಾವ್, ಮುಖ್ಯ ಕಾರ್ಯ ನಿರ್ವಹಾಣಾಧಿಕಾರಿ ಅಜಯ್ ಕುಮಾರ್ ಅಜಿಲ, ಕಟ್ಟಡದ ಮಾಲಕಿ ಬೆನೆಡಿಕ್ಟ್ ಸಲ್ದಾನ್ಹಾ ಅತಿಥಿಗಳಾಗಿ ಭಾಗವಹಿಸಿದ್ದರು.
ವಿಜಯ ಬ್ಯಾಂಕಿನ ನಿವೃತ್ತ ಅಧಿಕಾರಿ ಬೇಬಿ ಕುಂದರ್, ಸಂಘದ ಕಾನೂನು ಸಲಹೆಗಾರ ಸುರೇಶ್ ಶೆಟ್ಟಿ, ಮಣಿನಾಲ್ಕೂರು ವ್ಯ.ಸೇ.ಸಂಘದ ಕಾರ್ಯನಿರ್ವಹಣಾಧಿಕಾರಿ ಸುಧಾಕರ್ ಶೆಟ್ಟಿ, ಸಂಘದ ನಿರ್ದೇಶಕರಾದ ನರಸಿಂಹ ಹೊಳ್ಳ, ಪದ್ಮನಾಭ ರಾವ್, ಬಿ.ಸುರೇಶ್ ಭಂಡಾರಿ ಅರ್ಬಿ, ತೋಮಸ್ ಸಲ್ದಾನ್ಹಾ ಅನಿಲ್ ಪಿಂಟೊ, ಶಿವಪ್ರಸಾದ್ ಕನಪಾಡಿ, ರಮೇಶ್, ಪೂರ್ಣಿಮಾ ಕೆಂಪುಗುಡ್ಡೆ, ಲೋಸಿ ಡಿಸೋಜ, ಪೂರ್ಣಿಮಾ ಬೆದ್ರಗುಡ್ಡೆ ಮತ್ತಿತರರು ಉಪಸ್ಥಿತರಿದ್ದರು.
ಸಂಘದ ಉಪಾಧ್ಯಕ್ಷ ಆಲ್ವಿನ್ ವಿನಯ್ ಲೋಬೋ ಸ್ವಾಗತಿಸಿದರು. ನಿರ್ದೇಶಕರಾದ ಕಮಲಾಕ್ಷ ವಂದಿಸಿದರು. ಸಂಘದ ನೂತನ ಲೊರೆಟ್ಟೋ ಶಾಖೆಯ ವ್ಯವಸ್ಥಾಪಕ ದಿನೇಶ್ ಅಮೀನ್ ಪ್ರಸ್ತಾವಿಸಿ, ಕಾರ್ಯಕ್ರಮ ನಿರೂಪಿಸಿದರು.







