ಡ್ರಗ್ಸ್ ದಂಧೆ: ಮಣಿಪಾಲದಲ್ಲಿ ವಿದ್ಯಾರ್ಥಿಯ ಬಂಧನ; 14.94ಲಕ್ಷ ರೂ. ಮೌಲ್ಯದ ಎಂಡಿಎಂಎ ಮಾತ್ರೆ ವಶ

ಮಣಿಪಾಲ, ಅ.4: ಡ್ರಗ್ಸ್ ಮಾರಾಟ ಮಾಡುತ್ತಿದ್ದ ಮಣಿಪಾಲ ಎಂಐಟಿ ವಿದ್ಯಾರ್ಥಿಯೊಬ್ಬನನ್ನು ಉಡುಪಿ ಆಂತರಿಕ ಭದ್ರತಾ ವಿಭಾಗದ ಪೊಲೀಸರು ಹಾಗೂ ಮಣಿಪಾಲ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಮಣಿಪಾಲ ಎಂಐಟಿಯ ಇನ್‌ಸ್ಟ್ರುಮೆಂಟೆಶನ್ ಆ್ಯಂಡ್ ಕಂಟ್ರೋಲ್ ವಿಭಾಗದ ಏಳನೆ ಸೆಮಿಸ್ಟರ್ ವಿದ್ಯಾರ್ಥಿ ಹಿಮಾಂಶು ಜೋಶಿ(20) ಬಂಧಿತ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ.
ಇದೀಗ ಮಾದಕ ವಸ್ತು ಎಂಡಿಎಂಎ ಮಾತ್ರೆಗಳನ್ನು ದ್ವಿಚಕ್ರ ವಾಹನದಲ್ಲಿ ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದ ಈತನನ್ನು ಪೊಲೀಸರು ಮಣಿಪಾಲ ಶಿಂಬ್ರಾ ಸೇತುವೆ ಬಳಿ ಬಂಧಿಸಿದರು. ಈತನಿಂದ 14.94ಲಕ್ಷ ರೂ. ಮೌಲ್ಯದ ಒಟ್ಟು 498 ನಿಷೇಧಿತ ನಿದ್ರಾಜನಕ ಎಂಡಿಎಂಎ ಮಾತ್ರೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಅಲ್ಲದೆ ದ್ವಿಚಕ್ರ ವಾಹನ ಹಾಗೂ ಒಂದು ಮೊಬೈಲ್ ಕೂಡ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಉಡುಪಿ ಪೊಲೀಸ್ ಅಧೀಕ್ಷಕ ವಿಷ್ಣುವರ್ಧನ್ ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕುಮಾರ್‌ಚಂದ್ರ ಮಾರ್ಗದರ್ಶನದಲ್ಲಿ ಉಡುಪಿ ಆಂತರಿಕ ಭದ್ರತಾ ವಿಭಾಗದ ಪೊಲೀಸ್ ನಿರೀಕ್ಷಕ ಮಧು ಟಿ.ಎಸ್., ಉಡುಪಿ ವಿಭಾಗದ ಡಿವೈಎಸ್ಪಿ ಟಿ.ಆರ್.ಜೈಶಂಕರ್, ಮಣಿಪಾಲ ಪೊಲೀಸ್ ನಿರೀಕ್ಷಕ ಮಂಜುನಾಥ್ ಎಂ. ಗೌಡ, ಪೊಲೀಸ್ ಉಪನಿರೀಕ್ಷಕ ರಾಜಶೇಖರ್ ವಂದಲಿ, ಉಡುಪಿಯ ಸಹಾಯಕ ಔಷಧ ನಿಯಂತ್ರಕ ನಾಗರಾಜ್, ಸಿಬ್ಬಂದಿಗಳಾದ ಶೈಲೇಶ್, ದಿನೇಶ್ ಶೆಟ್ಟಿ, ಥೋಮನ್ಸ್, ಪ್ರಸನ್ನ, ಮಂಜುನಾಥ್ ಶೆಟ್ಟಿ, ಪ್ರಸಾದ್ ಶೆಟ್ಟಿ, ಆದರ್ಶ ನಾಯ್ಕ್ ಈ ಕಾರ್ಯಾಚರಣೆ ನಡೆಸಿದ್ದಾರೆ.








