ಹರ್ಯಾಣ: ಮೊಬೈಲ್ ಟವರ್ ಸ್ಥಾಪಿಸಿ ವಿದ್ಯಾರ್ಥಿಗಳ ಸಮಸ್ಯೆಗೆ ಸ್ಪಂದಿಸಿದ ಸೋನು ಸೂದ್

ಚಂಡೀಗಢ, ಅ.4: ಹರ್ಯಾಣದ ಮೋರ್ನಿ ಎಂಬ ಗ್ರಾಮದಲ್ಲಿ ಆನ್‌ಲೈನ್ ತರಗತಿಯ ಪ್ರಯೋಜನ ಪಡೆಯಲು ವಿದ್ಯಾರ್ಥಿಗಳು ಎದುರಿಸುತ್ತಿದ್ದ ಸಮಸ್ಯೆಗೆ ಸ್ಪಂದಿಸಿದ ಬಾಲಿವುಡ್ ಚಿತ್ರನಟ ಸೋನು ಸೂದ್, ಗ್ರಾಮದಲ್ಲಿ ಏರ್‌ಟೆಲ್ ಮೊಬೈಲ್ ಟವರ್ ಸ್ಥಾಪಿಸಿ ವಿದ್ಯಾರ್ಥಿಗಳಿಗೆ ನೆರವಾಗಿದ್ದಾರೆ.
ಈ ಗ್ರಾಮದ ವಿದ್ಯಾರ್ಥಿಯೊಬ್ಬ ಆನ್‌ಲೈನ್ ತರಗತಿಯ ಹಿನ್ನೆಲೆಯಲ್ಲಿ ಮರದ ಮೇಲೇರಿ ಮೊಬೈಲ್ ಸಿಗ್ನಲ್‌ಗಾಗಿ ಹೆಣಗಾಡುತ್ತಿದ್ದ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇದನ್ನು ಗಮನಿಸಿದ ಸೋನು ಸೂದ್, ಚಂಡೀಗಢ ಮೂಲದ ತನ್ನ ಮಿತ್ರ ಕರಣ್ ಗಿಹೋತ್ರ ನೆರವಿನಿಂದ ಗ್ರಾಮದಲ್ಲಿ ಇಂಡಸ್ ಟವರ್ಸ್ ಸಹಯೋಗದಿಂದ ಮೊಬೈಲ್ ಟವರ್ ಸ್ಥಾಪಿಸಿದ್ದಾರೆ ಎಂದು ವರದಿಯಾಗಿದೆ.
ಮಕ್ಕಳು ದೇಶದ ಭವಿಷ್ಯವಾಗಿದ್ದು ಅವರ ಉತ್ತಮ ಭವಿಷ್ಯಕ್ಕಾಗಿ ಸಮಾನ ಅವಕಾಶ ಒದಗಿಸಬೇಕಿದೆ. ವಿದ್ಯಾರ್ಥಿಗಳ ಪೂರ್ಣಸಾಮರ್ಥ್ಯ ಹೊರಹೊಮ್ಮಲು ಇರುವ ಅಡೆತಡೆಯನ್ನು ನಿವಾರಿಸಬೇಕು ಎಂದು ಸೋನು ಸೂದ್ ಹೇಳಿದ್ದಾರೆ. ಚಂಡೀಗಢದ ಸರಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಇತ್ತೀಚೆಗೆ ಸೂದ್ ಸ್ಮಾರ್ಟ್‌ಫೋನ್ ವಿತರಿಸಿದ್ದರು.





