ಮಹಾಕೃತಿಗಳನ್ನು ಓದಿದಾಗಲೆಲ್ಲಾ ಹೊಸ ಅರ್ಥಗಳು ಮೂಡುತ್ತವೆ: ಹಿರಿಯ ಲೇಖಕ ಜೋಗಿ
ಚಿನ್ನಮ್ಮನ ಲಗ್ನ-1893, ಪತ್ಮಂದೆ ಕೃತಿ ಬಿಡುಗಡೆ
ಬೆಂಗಳೂರು, ಅ. 4: ಯಾವುದೇ ಮಹಾಕೃತಿಗಳನ್ನು ಪ್ರತಿಸಲ ಓದಿದಾಗಲೂ ಆ ಕೃತಿಗಳಲ್ಲಿರುವ ವಸ್ತು ವಿಷಯಗಳು ಓದುಗನಿಗೆ ಹೊಸ ಹೊಸ ಅರ್ಥಗಳನ್ನು ಬಿಚ್ಚುಡುತ್ತಾ ಸಾಗುತ್ತದೆ ಎಂದು ಹಿರಿಯ ಲೇಖಕ ಜೋಗಿ ಅಭಿಪ್ರಾಯಿಸಿದ್ದಾರೆ.
ರವಿವಾರ ನಗರದಲ್ಲಿ ಅಂಕಿತ ಪುಸ್ತಕ ಪ್ರಕಾಶನ ವತಿಯಿಂದ ಆಯೋಜಿಸಿದ್ದ ಹಿರಿಯ ಸಾಹಿತಿ ಕೆ.ಸತ್ಯನಾರಾಯಣರವರ ಚಿನ್ನಮ್ಮನ ಲಗ್ನ-1893 ಕೃತಿ ಹಾಗೂ ಸಾಹಿತಿ ಅನುಬೆಳ್ಳೆರವರ ಪತ್ಮಂದೆ ಕಾದಂಬರಿಯನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಕುವೆಂಪುರವರ ಮಲೆಗಳಲ್ಲಿ ಮದುಮಗಳು ಕಾದಂಬರಿ ಓದಿದಾಗ ಹಾಗೂ ಅದರ ನಾಟಕ ರೂಪವನ್ನು ನೋಡಿದಾಗ ಪ್ರತಿಸಲವೂ ಹೊಸ ಹೊಸ ಅರ್ಥಗಳು ಬಿಚ್ಚಿಕೊಳ್ಳುತ್ತಾ ಹೋಗುತ್ತದೆ. ಅದೇ ಕಾದಂಬರಿಯನ್ನು ಲೇಖಕ ಕೆ.ಸತ್ಯನಾರಾಯಣ ಚೆನ್ನಮ್ಮನ ಲಗ್ನ ಕೃತಿಯಲ್ಲಿ ಮತ್ತಷ್ಟು ವಿಸ್ತರಿಸಿದ್ದಾರೆಂದು ಅವರು ತಿಳಿಸಿದರು.
ಚೆನ್ನಮ್ಮನ ಲಗ್ನ-1893 ಕೃತಿಯ ಪಾತ್ರಗಳು ಆ ಕಾಳದ ಮಹಿಳೆಯರ ಸ್ಥಿತಿಗತಿ ಹಾಗೂ ಪುರುಷಾಧಿಪತ್ಯದ ಶೊಷಣೆಯನ್ನು ಚಿನ್ನಮ್ಮನ ಪಾತ್ರದ ಮೂಲಕ ಲೇಖಕರು ಕಟ್ಟಿಕೊಟ್ಟಿದ್ದಾರೆ. ಈ ಕೃತಿಯನ್ನು ಸಮಾಜ ಶಾಸ್ತ್ರಿಯ ಅಧ್ಯಯನದ ನೆಲೆಯಲ್ಲಿ ಓದಿದಾಗ ನಮಗೆ ಭಿನ್ನವಾದ ನೋಟವನ್ನು ನೀಡಲಿದೆ ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಲೇಖಕರಾದ ಎನ್.ಎಸ್.ಶ್ರೀಧರ ಮೂರ್ತಿ, ಕೃತಿಕಾರರಾದ ಕೆ.ಸತ್ಯನಾರಾಯ, ಅನುಬೆಳ್ಳೆ ಅವರೊಂದಿಗೆ ಸಂವಾದ ನಡೆಸಿಕೊಟ್ಟರು.





