“ಅತ್ಯಾಚಾರ ಸಂತ್ರಸ್ತೆ ಯುವತಿಯ ವೀಡಿಯೊ ಟ್ವೀಟ್ ಮಾಡಿದ್ದು ಅಕ್ರಮ”
ಬಿಜೆಪಿಯ ಅಮಿತ್ ಮಾಳವೀಯ ಕ್ರಮಕ್ಕೆ ಮಹಿಳಾ ಆಯೋಗದ ಅಧ್ಯಕ್ಷೆ ಪ್ರತಿಕ್ರಿಯೆ

ಹೊಸದಿಲ್ಲಿ, ಅ.4: ಹತ್ರಸ್ ಅತ್ಯಾಚಾರ ಸಂತ್ರಸ್ತೆಯ ವೀಡಿಯೊ ಶೇರ್ ಮಾಡಿ ವಿವಾದ ಹುಟ್ಟುಹಾಕಿರುವ ಬಿಜೆಪಿ ಮುಖಂಡ ಅಮಿತ್ ಮಾಳವೀಯ ಕ್ರಮದ ಬಗ್ಗೆ ಪ್ರತಿಕ್ರಿಯಿಸಿರುವ ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ರೇಖಾ ಶರ್ಮ, ಯುವತಿ ಅತ್ಯಾಚಾರ ಸಂತ್ರಸ್ತೆಯಾದರೆ ವೀಡಿಯೊ ಟ್ವೀಟ್ ಮಾಡಿದ್ದು ದುರದೃಷ್ಟಕರ ಮತ್ತು ಅಕ್ರಮ ಎಂದಿದ್ದಾರೆ.
ಲೈಂಗಿಕ ದೌರ್ಜನ್ಯದ ಸಂತ್ರಸ್ತೆ ಅಥವಾ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದಾರೆ ಎಂದು ಶಂಕಿಸಲಾದವರ ಗುರುತನ್ನು ಬಹಿರಂಗಗೊಳಿಸುವವರಿಗೆ ಐಪಿಸಿ(ಭಾರತೀಯ ಅಪರಾಧ ಸಂಹಿತೆ) ಪ್ರಕಾರ 2 ವರ್ಷದ ಜೈಲುಶಿಕ್ಷೆ ವಿಧಿಸಬಹುದಾಗಿದೆ. ಅಮಿತ್ ಮಾಳವೀಯ ಶೇರ್ ಮಾಡಿರುವ ವೀಡಿಯೊವನ್ನು ಗಮನಿಸಿಲ್ಲ. ಆದರೆ ಈ ವೀಡಿಯೊ ಮಹಿಳೆಯ ಗುರುತನ್ನು ಬಹಿರಂಗಪಡಿಸಿದ್ದರೆ ಅದು ಖಂಡಿತಾ ಆಕ್ಷೇಪಾರ್ಹವಾಗಿದೆ ಮತ್ತು ಈ ಬಗ್ಗೆ ಮಾಳವೀಯಗೆ ನೋಟಿಸ್ ಜಾರಿಗೊಳಿಸಲಾಗುವುದು ಎಂದು ಉತ್ತರಪ್ರದೇಶ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ವಿಮಲಾ ಬಾಥಂ ಹೇಳಿದ್ದಾರೆ.
ಸುದ್ದಿಗಾರರ ಜೊತೆ ಮಾತನಾಡುತ್ತಿದ್ದ ಹತ್ರಸ್ ಅತ್ಯಾಚಾರ ಸಂತ್ರಸ್ತೆ ತನ್ನ ಕತ್ತು ಹಿಸುಕುವ ಪ್ರಯತ್ನ ನಡೆದಿತ್ತು ಎಂದು ಹೇಳುತ್ತಿರುವ 48 ಸೆಕೆಂಡ್‌ಗಳ ವೀಡಿಯೊವನ್ನು ಬಿಜೆಪಿ ಐಟಿ ವಿಭಾಗದ ಮುಖ್ಯಸ್ಥ ಅಮಿತ್ ಮಾಳವೀಯ ಶುಕ್ರವಾರ ಶೇರ್ ಮಾಡಿದ್ದು ಈ ಬಗ್ಗೆ ವ್ಯಾಪಕ ಆಕ್ರೋಶ ಮತ್ತು ಟೀಕೆ ವ್ಯಕ್ತವಾಗಿತ್ತು. ಶುಕ್ರವಾರ ಸಂಜೆ ಮತ್ತೊಂದು ಟ್ವೀಟ್ ಮಾಡಿದ್ದ ಮಾಳವೀಯ, ಹತ್ರಸ್ ದುಷ್ಕೃತ್ಯಕ್ಕೆ ಕೆಲವರು ಅತ್ಯಾಚಾರದ ಬಣ್ಣವನ್ನು ಯಾಕೆ ಬಳಿಯುತ್ತಿದ್ದಾರೆಯೋ ತಿಳಿಯದು. ಸಂತ್ರಸ್ತೆ ಅಥವಾ ಆಕೆಯ ತಾಯಿಯ ಆರಂಭಿಕ ಹೇಳಿಕೆಯಲ್ಲಿ ಅತ್ಯಾಚಾರದ ಉಲ್ಲೇಖವಿಲ್ಲ ಅಥವಾ ವಿವಿಧ ವೈದ್ಯಕೀಯ ತನಿಖೆಯ ವರದಿಯಲ್ಲೂ ಅತ್ಯಾಚಾರ ನಡೆದಿರುವುದನ್ನು ದೃಢಪಡಿಸಲಾಗಿಲ್ಲ. ಅವಳ ಸಾವಿಗೆ ಕಾರಣವಾದ ದೈಹಿಕ ಹಲ್ಲೆ ಯಾವುದೇ ಅಪರಾಧಕ್ಕಿಂತ ಕಡಿಮೆಯಾಗುತ್ತದೆಯೇ ? ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ ಬಿಜೆಪಿ ಮಹಿಳಾ ಮೋರ್ಚಾದ ಸಾಮಾಜಿಕ ಜಾಲತಾಣ ವಿಭಾಗದ ಉಸ್ತುವಾರಿ ಪ್ರೀತಿ ಗಾಂಧಿ ಮಾಡಿರುವ ಟ್ವೀಟ್ ಅನ್ನೂ ಮಾಳವೀಯ ಶೇರ್ ಮಾಡಿದ್ದಾರೆ. ‘ಸಂತ್ರಸ್ತೆಯ ವೀಡಿಯೊ ಪೋಸ್ಟ್ ಮಾಡಿದರೆ ಯಾವ ಕಾನೂನಿನ ಉಲ್ಲಂಘನೆಯಾಗುತ್ತದೆ ಎಂದು ನೀವು ವಿವರಿಸುವಿರಾ? ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವುದನ್ನು ಯಾವುದೇ ವರದಿಯಲ್ಲೂ ಸೂಚಿಸಿಲ್ಲ. ಇದು ಕಾಂಗ್ರೆಸನ್ನು ಬೆಂಬಲಿಸುವ ಮಾಧ್ಯಮಗಳು ಹೆಣೆದಿರುವ ಕತೆಯಾಗಿದೆ. ನಾವು ಕಾನೂನಿನ ನಿಯಮದಿಂದ ನಿಯಂತ್ರಿಸಲ್ಪಡುತ್ತಿದ್ದೇವೆಯೇ ಅಥವಾ ಕೆಲವರ ಭ್ರಮೆಯಿಂದಲೇ ?’ ಎಂದು ಪ್ರೀತಿ ಗಾಂಧಿ ಟ್ವೀಟ್ ಮಾಡಿದ್ದರು.







