ರೈತರನ್ನು ನಾಶ ಮಾಡಲು ನಾವು ಬಿಡುವುದಿಲ್ಲ: ಬಿಜೆಪಿ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ಪಂಜಾಬ್, ಅ. 3: ಕೇಂದ್ರದಲ್ಲಿ ಪಕ್ಷ ಅಧಿಕಾರಕ್ಕೆ ಬಂದ ತತ್‌ಕ್ಷಣ ವಿವಾದಾತ್ಮಕ ಕೃಷಿ ಕಾನೂನನ್ನು ಹಿಂದೆ ಪಡೆಯುತ್ತೇವೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ರವಿವಾರ ಪಂಜಾಬ್‌ನ ರೈತರಿಗೆ ಭರವಸೆ ನೀಡಿದ್ದಾರೆ. ವಿವಾದಾತ್ಮಕ ಮೂರು ಕೃಷಿ ಮಸೂದೆಗಳ ವಿರುದ್ಧ ಮೂರು ದಿನಗಳ ಟ್ರಾಕ್ಟರ್ ರ‍್ಯಾಲಿಯನ್ನು ಅವರು ಇಂದು ಉದ್ಘಾಟಿಸಿದರು.
ಕನಿಷ್ಠ ಬೆಂಬಲ ಬೆಲೆ, ಆಹಾರ ಸಂಗ್ರಹಣೆ ಹಾಗೂ ಸಗಟು ಮಾರುಕಟ್ಟೆ ದೇಶದ ಮೂರು ಆಧಾರ ಸ್ತಂಭಗಳು ಎಂದು ಹೇಳಿದ ರಾಹುಲ್ ಗಾಂಧಿ, ಪ್ರಧಾನಿ ನರೇಂದ್ರ ಮೋದಿ ಅವರು ಈ ವ್ಯವಸ್ಥೆ ನಾಶಗೊಳಿಸಲು ಬಯಸುತ್ತಿದ್ದಾರೆ ಎಂದರು. ‘‘ಅವರ ಏಕೈಕ ಗುರಿ ಕನಿಷ್ಠ ಬೆಂಬಲ ಬೆಲೆ ಹಾಗೂ ಆಹಾರ ಸಂಗ್ರಹಣೆಯನ್ನು ನಾಶಮಾಡುವುದು. ಅದನ್ನು ಮಾಡಲು ಕಾಂಗ್ರೆಸ್ ಸರಕಾರ ಎಂದಿಗೂ ಅವಕಾಶ ನೀಡದು’’ ಎಂದು ಅವರು ಹೇಳಿದರು. ‘‘ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ತಕ್ಷಣ ಈ ಕಾನೂನುಗಳನ್ನು ಹಿಂದೆ ಪಡೆಯುತ್ತೇವೆ ಎಂದು ನಾನು ಭರವಸೆ ನೀಡುತ್ತೇನೆ. ನಾವು ನರೇಂದ್ರ ಮೋದಿ ಸರಕಾರದ ವಿರುದ್ಧ ಹೋರಾಡುತ್ತೇವೆ ಹಾಗೂ ಈ ಕಾನೂನಗಳನ್ನು ಹಿಂದೆ ತೆಗೆಯುತ್ತೇವೆ’’ ಎಂದು ಅವರು ಹೇಳಿದ್ದಾರೆ. ಕೇಂದ್ರದ ವಿರುದ್ಧ ಹೋರಾಡಲು ಕೃಷಿ ಕ್ಷೇತ್ರ ರಕ್ಷಿಸುವ (ಖೇತಿ ಬಚಾವೊ ಯಾತ್ರ) ಯಾತ್ರೆಯನ್ನು ಕಾಂಗ್ರೆಸ್ ಸಂಘಟಿಸುತ್ತಿದ್ದು, ಇದರ ಆರಂಭಿಕ ಹಂತವಾಗಿ ಮೂರು ದಿನಗಳ ಟ್ಯಾಕ್ಟರ್ ರ‍್ಯಾಲಿ ನಡೆಸಲಾಗುತ್ತಿದೆ.





