2021ರ ಜುಲೈ ವೇಳೆಗೆ 20-25 ಕೋಟಿ ಜನರಿಗೆ ಕೋವಿಡ್ ಲಸಿಕೆ: ಸರಕಾರದ ಯೋಜನೆ

ಹೊಸದಿಲ್ಲಿ,ಅ.4: ಮುಂದಿನ ವರ್ಷದ ಜುಲೈ ವೇಳೆಗೆ ಸರಕಾರವು 40-50 ಕೋಟಿ ಡೋಸ್‌ಗಳಷ್ಟು ಕೋವಿಡ್-19 ಲಸಿಕೆಯನ್ನು ಸ್ವೀಕರಿಸಲಿದ್ದು,ಅಂದಾಜು 20-25 ಕೋಟಿ ಜನರಿಗೆ ಲಸಿಕೆಯನ್ನು ನೀಡುವ ಯೋಜನೆಯನ್ನು ಹೊಂದಿದೆ ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಅವರು ಸಾಮಾಜಿಕ ಜಾಲತಾಣಗಳಲ್ಲಿಯ ತನ್ನ ಫಾಲೋವರ್‌ಗಳೊಂದಿಗಿನ ‘ಸಂಡೇ ಸಂವಾದ ’ಕಾರ್ಯಕ್ರಮದಲ್ಲಿ ತಿಳಿಸಿದರು.
ರಾಜ್ಯಗಳು ಲಸಿಕೆ ನೀಡಲು ತಮ್ಮ ಆದ್ಯತಾ ಗುಂಪುಗಳ ಬಗ್ಗೆ ಅಕ್ಟೋಬರ್ ಅಂತ್ಯದೊಳಗೆ ಕೇಂದ್ರಕ್ಕೆ ಮಾಹಿತಿಗಳನ್ನು ಸಲ್ಲಿಸಬೇಕಿದ್ದು,ಇದಕ್ಕಾಗಿ ಆರೋಗ್ಯ ಸಚಿವಾಲಯವು ಅಗತ್ಯ ನಮೂನೆಯನ್ನು ಸಿದ್ಧಗೊಳಿಸುತ್ತಿದೆ ಎಂದೂ ಅವರು ತಿಳಿಸಿದರು.ಸರಕಾರಿ ಮತ್ತು ಖಾಸಗಿ ಕ್ಷೇತ್ರಗಳ ವೈದ್ಯರು,ನರ್ಸ್‌ಗಳು,ಅರೆ ವೈದ್ಯಕೀಯ ಸಿಬ್ಬಂದಿಗಳು,ಸ್ವಚ್ಛತಾ ಸಿಬ್ಬಂದಿಗಳು,ಆಶಾ ಕಾರ್ಯಕರ್ತೆಯರು, ಕಣ್ಗಾವಲು ಅಧಿಕಾರಿಗಳು ಸೇರಿದಂತೆ ಕೋವಿಡ್ ನಿರ್ವಹಣೆಯಲ್ಲಿ ತೊಡಗಿಕೊಂಡಿರುವ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ನೀಡಿಕೆಯಲ್ಲಿ ಮೊದಲ ಆದ್ಯತೆಯನ್ನು ನೀಡಲಾಗುತ್ತದೆ. ಉನ್ನತ ಮಟ್ಟದ ತಜ್ಞರ ತಂಡವೊಂದು ಲಸಿಕೆಗಳ ಎಲ್ಲ ಮಗ್ಗಲುಗಳನ್ನು ಪರಿಶೀಲಿಸುತ್ತಿದೆ ಎಂದರು.ಆದ್ಯತಾ ಗುಂಪುಗಳನ್ನು ಗುರುತಿಸುವ ಪ್ರಕ್ರಿಯೆಯನ್ನು ಅಕ್ಟೋಬರ್ ಅಂತ್ಯದೊಳಗೆ ಪೂರ್ಣಗೊಳಿಸುವ ಗುರಿಯನ್ನು ಹೊಂದಲಾಗಿದೆ. ಲಸಿಕೆಗಳನ್ನು ದಾಸ್ತಾನಿರಿಸಲು ಬ್ಲಾಕ್ ಮಟ್ಟದವರೆಗೂ ಶೀತಲ ಘಟಕಗಳ ವ್ಯವಸ್ಥೆ ಮತ್ತು ಇತರ ಮೂಲಸೌಕರ್ಯಗಳ ಬಗ್ಗೆ ವಿವರಗಳನ್ನು ಸಲ್ಲಿಸುವಂತೆಯೂ ರಾಜ್ಯಗಳಿಗೆ ಸೂಚಿಸಲಾಗಿದೆ.
ಮಾನವ ಸಂಪನ್ಮೂಲ,ತರಬೇತಿ,ಉಸ್ತುವಾರಿ ಮತ್ತು ಇತರ ವಿಷಯಗಳಲ್ಲಿ ಸಾಮರ್ಥ್ಯ ನಿರ್ಮಾಣಕ್ಕೂ ಕೇಂದ್ರವು ಯೋಜನೆಗಳನ್ನು ರೂಪಿಸುತ್ತಿದೆ. ಕೋವಿಡ್-19ಕ್ಕೆ ಸಂಬಂಧಿಸಿದಂತೆ ರೋಗ ನಿರೋಧಕ ಶಕ್ತಿಯ ದತ್ತಾಂಶಗಳ ಮೇಲೂ ಸರಕಾರವು ಗಮನವಿಟ್ಟಿದೆ. ಲಸಿಕೆಗಳು ಸಿದ್ಧಗೊಂಡ ಬಳಿಕ ಅವುಗಳ ನ್ಯಾಯಯುತ ಮತ್ತು ಸಮಾನ ವಿತರಣೆಯಾಗುವಂತೆ ನೋಡಿಕೊಳ್ಳಲಾಗುವುದು. ದೇಶದ ಪ್ರತಿಯೊಬ್ಬರಿಗೂ ಲಸಿಕೆ ದೊರಕುವಂತೆ ಮಾಡುವುದು ಸರಕಾರದ ಅತ್ಯುನ್ನತ ಆದ್ಯತೆಯಾಗಿದೆ. ನೀತಿ ಆಯೋಗದ ಸದಸ್ಯ (ಆರೋಗ್ಯ) ಡಾ.ವಿ.ಕೆ.ಪಾಲ್ ನೇತೃತ್ವದ ಉನ್ನತ ಮಟ್ಟದ ಸಮಿತಿಯು ಸಮಗ್ರ ಪ್ರಕ್ರಿಯೆಯ ರೂಪುರೇಷೆಗಳನ್ನು ಸಿದ್ಧಗೊಳಿಸುತ್ತಿದೆ ಎಂದು ಅವರು ತಿಳಿಸಿದರು.
ಲಸಿಕೆಯ ದುರುಪಯೋಗ ಮತ್ತು ಕಾಳಸಂತೆಗೆ ಯಾವುದೇ ಅವಕಾಶವಿರುವುದಿಲ್ಲ ಎಂದು ತಿಳಿಸಿದ ಹರ್ಷವರ್ಧನ್, ಲಸಿಕೆಗಳನ್ನು ಕೇಂದ್ರಮಟ್ಟದಲ್ಲಿ ಖರೀದಿಸಲಾಗುತ್ತಿದ್ದು,ಪೂರ್ವ ನಿರ್ಧರಿತ ಆದ್ಯತೆಯಂತೆ ವ್ಯವಸ್ಥಿತ ರೀತಿಯಲ್ಲಿ ಅವುಗಳನ್ನು ವಿತರಿಸಲಾಗುವುದು. ಪಾರದರ್ಶಕತೆ ಮತ್ತು ಉತ್ತರದಾಯಿತ್ವವನ್ನು ಖಚಿತಪಡಿಸಲು ಮುಂಬರುವ ತಿಂಗಳುಗಳಲ್ಲಿ ಇಡೀ ಪ್ರಕ್ರಿಯೆಯ ವಿವರಗಳನ್ನು ಹಂಚಿಕೊಳ್ಳಲಾಗುವುದು ಎಂದು ಹೇಳಿದರು.ಭಾರತದಲ್ಲಿ ರಶ್ಯದ ‘ಸ್ಫುಟ್ನಿಕ್-ಲಸಿಕೆಯ ಮೂರನೇ ಹಂತದ ಕ್ಲಿನಿಕಲ್ ಪ್ರಯೋಗದ ಕುರಿತು ಪ್ರಶ್ನೆಗೆ ಉತ್ತರಿಸಿದ ಅವರು,ಈ ವಿಷಯವಿನ್ನೂ ಸರಕಾರದ ಪರಿಶೀಲನೆಯಲ್ಲಿದ್ದು,ಈವರೆಗೆ ಯಾವುದೇ ನಿರ್ಧಾರವನ್ನು ತೆಗೆದುಕೊಂಡಿಲ್ಲ ಎಂದು ಸ್ಪಷ್ಟಪಡಿಸಿದರು.







