ಕಳವು ಪ್ರಕರಣ: ಇಬ್ಬರು ಆರೋಪಿಗಳ ಬಂಧನ

ಕುಂದಾಪುರ, ಅ.4: ಕುಂದಾಪುರ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ನಡೆದ ಮೂರು ಮನೆ ಕಳವು ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ಕುಂದಾಪುರ ಪೊಲೀಸರ ತಂಡ ರವಿವಾರ ಬಂಧಿಸಿದೆ.
ಹೊನ್ನಾವರ ತಾಲೂಕು ಮಂಕಿಯ ನಿವಾಸಿ ವಿಲ್ಸನ್ ಪಿಯಾದಾಸ್(29) ಹಾಗೂ ತೆಕ್ಕಟ್ಟೆಯ ಕನ್ನುಕೆರೆ 2ನೇ ಕ್ರಾಸ್‌ನ ನಿವಾಸಿ ಗಂಗಾಧರ(40) ಬಂಧಿತ ಆರೋಪಿಗಳು. ಇವರಿಂದ ಕಳವುಗೈದ 64.780 ಗ್ರಾಂ ಚಿನ್ನ, 112 ಗ್ರಾಂ ಬೆಳ್ಳಿಯ ಆಭರಣ ಹಾಗೂ ಇತರೆ ಸೊತ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಇವರು 2019ರ ಮೇ 7ರಂದು ಕಾವ್ರಾಡಿ ಗ್ರಾಮದ ಮುಳ್ಳುಗುಡ್ಡೆಯ ನಾಗರಾಜ ಎಂಬವರ ಮನೆಗೆ ನುಗ್ಗಿ 64,900ರೂ. ಮೌಲ್ಯದ ಚಿನ್ನ, ಬೆಳ್ಳಿ, ನಗದು, ಅದೇ ವರ್ಷ ಜೂ.17ರಂದು ಬಸ್ರೂರು ಗ್ರಾಮದ ಕೊಳ್ಕೇರಿ ಮಹಾ ಲಿಂಗ ಎಂಬವರ ಮನೆಗೆ ನುಗ್ಗಿ 2ಲಕ್ಷ ರೂ. ಮೌಲ್ಯದ ಚಿನ್ನಾಭರಣ ಮತ್ತು ನ.26 ರಂದು ಮೂಡ್ಲಕಟ್ಟೆಯ ರೈಲು ನಿಲ್ದಾಣ ಬಳಿಯ ವಸತಿ ಗೃಹದಲ್ಲಿ ಸುಬ್ಬ ದೇವಾಡಿಗ ಎಂಬವರ ನಗದು, ಚಿನ್ನಾಭರಣ ಕಳವುಗೈದಿದ್ದರು.
ಹೊನ್ನಾವರ ಮೂಲದ ವಿಲ್ಸನ್ ಬಸ್ರೂರು, ಮೇರ್ಡಿ, ಕಟ್ಕೇರಿಯಲ್ಲಿ ಬಾಡಿಗೆ ಮನೆಯಲ್ಲಿದ್ದುಕೊಂಡು ಕಳ್ಳತನ ಮಾಡುತ್ತಿದ್ದನು. ಆತನಿಗೆ ಗಂಗಾಧರ ಸಹಕಾರ ನೀಡುತ್ತಿದ್ದನು. ಕಳವು ಮಾಡಿದ ಚಿನ್ನಾಭರಣಗಳನ್ನು ಕೋಟೇಶ್ವರ ಹಾಗೂ ಕುಂದಾಪುರ ಪರಿಸರದ ಸೊಸೈಟಿಗಳಲ್ಲಿ ಅಡವಿಟ್ಟು ಹಣ ಪಡೆದುಕೊಳ್ಳುತ್ತಿದ್ದರು. ವಿಲ್ಸನ್ ಈ ಹಿಂದೆ ಭಟ್ಕಳ ಹಾಗೂ ಮಂಕಿ ಠಾಣಾ ವ್ಯಾಪಿಯಲ್ಲಿಯೂ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿ ಬಂಧಿತನಾಗಿ, ಬಳಿಕ ಜಾಮೀನಿನ ಮೇಲೆ ಬಿಡುಗಡೆ ಹೊಂದಿದ್ದ.
ಉಡುಪಿ ಎಸ್ಪಿ ಎನ್.ವಿಷ್ಣುವದರ್ನ್ ಆದೇಶದಂತೆ ಹೆಚ್ಚುವರಿ ಎಸ್ಪಿ ಕುಮಾರ ಚಂದ್ರ ಹಾಗೂ ಕುಂದಾಪುರ ಎಎಸ್‌ಪಿ ಹರಿರಾಂ ಶಂಕರ್ ಮಾರ್ಗದರ್ಶನದಲ್ಲಿ ಕುಂದಾಪುರ ವೃತ್ತ ನಿರೀಕ್ಷಕ ಗೋಪಿಕೃಷ್ಣ ಕೆ.ಆರ್. ನೇತೃತ್ವದಲ್ಲಿ ಎಸ್‌ಐಗಳಾದ ಗ್ರಾಮಾಂತರ ಠಾಣೆಯ ರಾಜ್‌ಕುಮಾರ್, ಶಂಕರನಾರಾಯಣ ಠಾಣೆಯ ಶ್ರೀಧರ ನಾಯ್ಕಾ, ನಗರ ಠಾಣೆಯ ಸದಾಶಿವ, ಸಿಬಂದಿಯಾದ ಸತೀಶ್, ಅನಿಲ್, ಮಂಜುನಾಥ, ಸಂತೋಷ, ಸೀತಾರಾಮ, ವಿಕ್ಟರ್, ಗುರುರಾಜ್, ಉದಯ, ಚಾಲಕರಾದ ರವೀಂದ್ರ, ಸುರೇಶ್, ಶಿವಾಂದ ಈ ಕಾರ್ಯಾಚರಣೆ ನಡೆಸಿದ್ದಾರೆ.







