ಮತ್ತೊಂದು ಮೈಲುಗಲ್ಲು ತಲುಪಿದ ಎಂ.ಎಸ್.ಧೋನಿ

ದುಬೈ,ಅ.4: ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಎಂ.ಎಸ್ .ಧೋನಿ ತಮ್ಮ ಯಶಸ್ವಿ ಕಿರೀಟಕ್ಕೆ ಮತ್ತೊಂದು ಗರಿ ಸೇರಿಸಿಕೊಂಡರು. ಈಗ ನಡೆಯುತ್ತಿರುವ ಐಪಿಎಲ್ ನಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ಪಂದ್ಯದಲ್ಲಿ ವಿಕೆಟ್ ಕೀಪರ್ ಆಗಿ 100ನೇ ಕ್ಯಾಚ್ ಪಡೆದು ಮತ್ತೊಂದು ಮೈಲುಗಲ್ಲು ತಲುಪಿದರು.
ಧೋನಿ ಕೆಕೆಆರ್ ತಂಡದ ದಿನೇಶ್ ಕಾರ್ತಿಕ್ ಬಳಿಕ 100 ಐಪಿಎಲ್ ಕ್ಯಾಚ್ ಗಳನ್ನು ಪಡೆದ 2ನೇ ವಿಕೆಟ್ ಕೀಪರ್ ಎನಿಸಿಕೊಂಡರು. ಕಾರ್ತಿಕ್ ಐಪಿಎಲ್ ನಲ್ಲಿ 100 ಕ್ಯಾಚ್ ಗಳನ್ನು ಪಡೆದಿದ್ದ ಮೊದಲ ವಿಕೆಟ್ ಕೀಪರ್ ಎಂಬ ಹಿರಿಮೆ ಪಾತ್ರರಾಗಿದ್ದರು.2017ರಲ್ಲಿ ಗುಜರಾತ್ ಲಯನ್ಸ್ ಪರ ಆಡುವಾಗ ಈ ಸಾಧನೆ ಮಾಡಿದ್ದರು. ಐಪಿಎಲ್ ನಲ್ಲಿ ವಿಕೆಟ್ ಕೀಪಿಂಗ್ ನ ಮೂಲಕ ಹೆಚ್ಚು ಬ್ಯಾಟ್ಸ್ ಮನ್ ಗಳನ್ನು ಔಟ್ ಮಾಡಿರುವ ವಿಕೆಟ್ ಕೀಪರ್ ಗಳ ಪಟ್ಟಿಯಲ್ಲಿ ಧೋನಿ (139)ಮೊದಲ ಸ್ಥಾನದಲ್ಲಿದ್ದಾರೆ. ಕಾರ್ತಿಕ್ 133 ಬಲಿ ಪಡೆದಿದ್ದರು.
52 ಎಸೆತಗಳಲ್ಲಿ 63 ರನ್ ಗಳಿಸಿದ್ದ ರಾಹುಲ್ ನೀಡಿದ್ದ ಕ್ಯಾಚ್ ನ್ನು ಆಕರ್ಷಕ ಡೈವ್ ಮೂಲಕ ಪಡೆದಿದ್ದ ಧೋನಿ ಈ ಮೈಲುಗಲ್ಲು ತಲುಪಿದರು.





