ಯುವತಿಗೆ ವಂಚನೆ: ಆರೋಪಿ ಸೆರೆ
ಪುತ್ತೂರು : ಆಂಧ್ರಪ್ರದೇಶದ ಹೈದರಾಬಾದ್ ನಗರದ ರಾಚಕೊಂಡ ಪೊಲೀಸ್ ಠಾಣೆ ವ್ಯಾಪ್ತಿಯ ನಿವಾಸಿ ಯುವತಿಯೊಬ್ಬಳನ್ನು ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ಬೆಳೆಸಿ ವಂಚಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಹೈದರಾಬಾದ್ ಪೊಲೀಸರು ಪುತ್ತೂರಿನ ಸಾಲ್ಮರ ನಿವಾಸಿ ಯುವಕನೊಬ್ಬನನ್ನು ರವಿವಾರ ರಾತ್ರಿ ಬಂಧಿಸಿದ್ದಾರೆ.
ಇಲ್ಲಿನ ಮೊಹಮ್ಮದ್ ಫೈಝಲ್ (24) ಬಂಧಿತ ಆರೋಪಿ. ಈತ ದಲಿತ ಸಮುದಾಯಕ್ಕೆ ಸೇರಿದ ಯುವತಿಯೊಂದಿಗೆ ಇನ್‍ಸ್ಟಾಗ್ರಾಮ್ ಮೂಲಕ ಸಂಪರ್ಕ ಬೆಳೆಸಿದ್ದು, ಮದುವೆಯಾಗುವುದಾಗಿ ನಂಬಿಸಿ ಆಕೆಯೊಂದಿಗೆ ದೈಹಿಕ ಸಂಪರ್ಕ ಹೊಂದಿದ್ದ ಎಂದು ಆರೋಪಿಸಲಾಗಿದ್ದು, ಬಳಿಕ ಮದುವೆಯನ್ನು ನಿರಾಕರಿಸಿ, ಬೆದರಿಸಿರುವುದಾಗಿ ಯುವತಿಯು ರಾಚಕೊಂಡ ಪೊಲೀಸರಿಗೆ ದೂರು ನೀಡಿದ್ದರು.
ಸಾಮಾಜಿಕ ಜಾಲತಾಣದಲ್ಲಿ ಆರೋಪಿಯ ವಿಳಾಸವನ್ನು ಪತ್ತೆ ಹಚ್ಚಿದ ಹೈದರಾಬಾದ್ ಪೊಲೀಸರು ಪುತ್ತೂರಿಗೆ ಆಗಮಿಸಿ ಪುತ್ತೂರು ನಗರ ಪೊಲೀಸರ ಸಹಕಾರದೊಂದಿಗೆ ಆರೋಪಿಯನ್ನು ಬಂಧಿಸಿ ಕರೆದೊಯ್ದಿದ್ದಾರೆ.
ಘಟನೆಯ ಕುರಿತಂತೆ ಹೆಚ್ಚಿನ ಮಾಹಿತಿಗಳು ಸ್ಥಳೀಯ ಪೊಲೀಸರಿಗೂ ಲಭ್ಯವಿಲ್ಲ ಎಂದು ತಿಳಿದುಬಂದಿದೆ.





