ಆದಿತ್ಯನಾಥ್ ಓರ್ವ ಹೇಡಿ: ಶಾಯಿ ಎರಚಿದ ಘಟನೆಯ ಬಳಿಕ ಸಂಜಯ್ ಸಿಂಗ್ ಆಕ್ರೋಶ

ಹೊಸದಿಲ್ಲಿ, ಅ.5: ಹತ್ರಸ್ ಜಿಲ್ಲೆಯಲ್ಲಿ ಅತ್ಯಾಚಾರ ಹಾಗೂ ಭೀಕರ ಹಲ್ಲೆಯಿಂದಾಗಿ ದಿಲ್ಲಿ ಆಸ್ಪತ್ರೆಯಲ್ಲಿ ಮೃತಪಟ್ಟಿರುವ ಸಂತ್ರಸ್ತ ದಲಿತ ಯುವತಿಯ ಕುಟುಂಬ ಸದಸ್ಯರನ್ನು ಸೋಮವಾರ ಭೇಟಿಯಾಗಿ ವಾಪಸಾಗುತ್ತಿದ್ದಾಗ ಆಮ್ ಆದ್ಮಿ ಪಕ್ಷ( ಎಎಪಿ)ಮುಖಂಡ ಸಂಜಯ್ ಸಿಂಗ್ ಮೇಲೆ ಶಾಯಿ ಎರಚಿರುವ ಘಟನೆ ನಡೆದಿದೆ.
ಸಂತ್ರಸ್ತೆ ಯುವತಿಯ ಮನೆಯ ಹೊರಗೆ ಸಿಂಗ್ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದಾಗ ದೀಪಕ್ ಹೆಸರಿನ ವ್ಯಕ್ತಿ ಶಾಯಿ ಎರಚಿ ಘೋಷಣೆ ಕೂಗಿದ್ದಾನೆ. ಇದರಿಂದ ರಾಜ್ಯಸಭಾ ಸಂಸದ ಒಂದು ಕ್ಷಣ ವಿಚಲಿತರಾದರು. ದೀಪಕ್ ನನ್ನು ಆಪ್ ಬೆಂಬಲಿಗರು ಹಿಡಿದು ಪೊಲೀಸರಿಗೆ ಒಪ್ಪಿಸಿದರು.
ತನ್ನ ಮೇಲೆ ಶಾಯಿ ಎರಚಿದ ಘಟನೆಯ ಬಳಿಕ ಉತ್ತರಪ್ರದೇಶ ಮುಖ್ಯಮಂತ್ರಿ ಆದಿತ್ನನಾಥ್ ರನ್ನು ತರಾಟೆಗೆ ತೆಗೆದುಕೊಂಡ ಸಿಂಗ್, ಆದಿತ್ಯನಾಥ್ ಠಾಕೂರ್ ಅಲ್ಲ,ಆತ ಓರ್ವ ಹೇಡಿ ಎಂದು ದೂಷಿಸಿದ್ದಾರೆ.
“ಸಂತ್ರಸ್ತ ಯುವತಿಯ ಮನೆಗೆ ಹೋಗಿ ವಾಪಸಾಗುತ್ತಿದ್ದ ವೇಳೆ ಇಂಕ್ ಎರಚಲಾಗಿದೆ. ಇದೊಂದು ಹೇಡಿಗಳ ಕೃತ್ಯ. ಆದಿತ್ಯನಾಥ್ ಅವರೇ ನೀವು ಠಾಕೂರ್ ಅಲ್ಲ. ನೀವೊಬ್ಬ ಹೇಡಿ. ನಿಮಗೆ ಎಷ್ಟು ಸಾಧ್ಯವೋ ಅಷ್ಟು ಪ್ರಕರಣಗಳನ್ನು ನನ್ನ ಮೇಲೆ ದಾಖಲಿಸಿ. ನನ್ನ ಮೇಲೆ ಲಾಠಿಚಾರ್ಜ್ ಮಾಡಿಸಿ, ಇಲ್ಲವೇ ಸಾಯಿಸಿ. ಆದರೆ ಸಂತ್ರಸ್ತ ಕುಟುಂಬಕ್ಕೆ ನ್ನಾಯ ಒದಗಿಸಲು ನನ್ನ ಹೋರಾಟ ಮುಂದುವರಿಯಲಿದೆ ಎಂದು ಸಂಜಯ್ ಸಿಂಗ್ ಟ್ವೀಟ್ ಮಾಡಿದ್ದಾರೆ.







