ಬಿ.ಸಿ.ರೋಡ್- ಅಡ್ಡಹೊಳೆ ರಾ. ಹೆದ್ದಾರಿ ಅವ್ಯವಸ್ಥೆ: ಅವಘಡ ಸಂಭವಿಸಿದರೆ ಕ್ರಿಮಿನಲ್ ಪ್ರಕರಣ: ಡಿಸಿ
ಮಂಗಳೂರು, ಅ.5: ಬಿಸಿರೋಡುನಿಂದ ಅಡ್ಡಹೊಳೆವರೆಗಿನ ರಾಷ್ಟ್ರೀಯ ಹೆದ್ದಾರಿ ಸೇರಿದಂತೆ ಹೆದ್ದಾರಿಗಳಲ್ಲಿರುವ ಗುಂಡಿ- ಹೊಂಡಗಳನ್ನು ಮುಚ್ಚಿಸುವ ಕೆಲಸ ತಕ್ಷಣ ಮಾಡಬೇಕು. ಒಂದು ವೇಳೆ ಯಾವುದೇ ರೀತಿಯ ಅವಘಡ ಸಂಭವಿಸಿದರೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು ಎಂದು ದ.ಕ. ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ಎಚ್ಚರಿಸಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅಧ್ಯಕ್ಷತೆಯಲ್ಲಿ ಇಂದು ನಡೆದ ದ.ಕ. ಜಿಲ್ಲಾ ಪಂಚಾಯತ್‌ನ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಬಿ.ಸಿ.ರೋಡು ಅಡ್ಡಹೊಳೆ ರಾಷ್ಟ್ರೀಯ ಹೆದ್ದಾರಿ ಅವ್ಯವಸ್ಥೆ ಕುರಿತ ಚರ್ಚೆಯ ವೇಳೆ ಈ ಎಚ್ಚರಿಕೆ ನೀಡಿದರು.
ಬಿಸಿರೋಡ್‌ನಿಂದ ಅಡ್ಡಹೊಳೆ ರಸ್ತೆ ತೀರಾ ಹದಗೆಟ್ಟಿದೆ. ವಾಹನ ಸಂಚಾರರು ಬದಲಿ ಮಾರ್ಗಗಳನ್ನು ಅನುಸರಿಸುತ್ತಿರುವುದು ಕಂಡುಬಂದಿದೆ. ಈವರೆಗೆ ಕಾಮಗಾರಿಗೆ ಮಳೆ ಅಡ್ಡಿಯಾಗಿತ್ತು. ಇನ್ನು ಆ ಕಾರಣ ಬೇಡ. 15 ದಿನಗಳಲ್ಲಿ ಗುಂಡಿ ಮುಚ್ಚುವ ಕೆಲಸ ಮಾಡಬೇಕು ಎಂದು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಸೂಚಿಸಿದರು.
ಪಚ್ಚನಾಡಿ ಸಮಸ್ಯೆಗೆ ನಾಲ್ಕು ವಲಯಗಳ ಆಯ್ಕೆ
ಪಚ್ಚನಾಡಿ ತ್ಯಾಜ್ಯ ಹರಿದು ಉಂಟಾಗಿರುವ ಸಮಸ್ಯೆಗೆ ಸಂಬಂಧಿಸಿ ವಿಲೇ ಕಾರ್ಯ ನಡೆದಿಲ್ಲ. ಇದರಿಂದ ತೊಂದರೆಯಾಗುತ್ತಿದೆ. ನಗರ ವ್ಯಾಪ್ತಿಯ ಎಲ್ಲಾ ಕಡೆಯ ಟನ್ ಗಟ್ಟಲೆ ಕಸ ಅಲ್ಲಿಗೆ ಮತ್ತೆ ಬರುತ್ತಿರುವುದರಿಂದ ಸಮಸ್ಯೆಯಾಗುತ್ತಿದೆ ಎಂದು ಶಾಸಕ ಡಾ. ಭರತ್ ಶೆಟ್ಟಿ ಸಭೆಯ ಗಮನ ಸೆಳೆದರು.
ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಅಲ್ಲಿರುವ ತ್ಯಾಜ್ಯ ವಿಲೇಗೆ ಸರಕಾರದಿಂದ ಸೂಚನೆಗೆ ಕಾಯಲಾಗುತ್ತಿದೆ. ಇದರ ನಡು ವೆಯೇ ನಾಲ್ಕು ವಲಯಗಳನ್ನು ಆಯ್ಕೆ ಮಾಡಿ ಆಯಾ ಸ್ಥಳಗಳಲ್ಲಿ ಕಸ ವಿಲೇ ಮಾಡಲು ಜಾಗ ಗುರುತಿಸಲು ಸೂಚನೆ ನೀಡಲಾಗಿದೆ. ಒಂದು ವಾರದೊಳಗೆ ಈ ಕುರಿತು ಪ್ರತ್ಯೇಕ ಸಭೆ ಡೆಸಿ ಚರ್ಚಿಸಲಾಗುವುದು ಎಂದರು.
ಪಿಂಚಣಿ ವಿಳಂಬ- ಅದಾಲತ್‌ಗೆ ಸಲಹೆ
ಪಿಂಚಣಿದಾರರಿಗೆ ಪಿಂಚಣಿ ವಿಳಂಬವಾಗುತ್ತಿರುವ ಕುರಿತಂತೆ ಗಮನ ಸೆಳೆದ ಶಾಸಕ ಯು.ಟಿ.ಖಾದರ್, ತಾಲೂಕು ಮಟ್ಟದಲ್ಲಿ ಪಿಂಚಣಿ ಅದಾಲತ್ ನಡೆಸಬೇಕೆಂದು ಸೂಚಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಸಹಾಯಕ ಆಯುಕ್ತರ ನೇತೃತ್ವದಲಲಿ ತಾಲೂಕು ಹಂತದಲ್ಲಿ ಪಿಂಚಣಿ ಅದಾಲತ್ ಮಾಡಲಾಗುವುದು ಎಂದರು.







