ಎಸ್ಟಿ ಮೀಸಲಾತಿಗೆ ಆಗ್ರಹಿಸಿ ಹೋರಾಟ: ಸಮುದಾಯದ ಸ್ವಾಮೀಜಿ, ಮುಖಂಡರ ಜತೆ ಸಚಿವ ಕೆ.ಎಸ್.ಈಶ್ವರಪ್ಪ ಸಭೆ

ಬೆಂಗಳೂರು, ಅ. 5: ಕುರುಬ ಸಮುದಾಯಕ್ಕೆ ಪರಿಶಿಷ್ಟ ಪಂಗಡ(ಎಸ್ಟಿ) ಮೀಸಲಾತಿ ಕಲ್ಪಿಸುವ ಸಂಬಂಧದ ಹೋರಾಟದ ರೂಪುರೇಷೆಗಳನ್ನು ಸಿದ್ದಪಡಿಸುವ ಸಂಬಂಧ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ, ಸಮುದಾಯದ ಸ್ವಾಮೀಜಿಗಳು, ಕುರುಬ ಸಮಾಜದ ಮುಖಂಡರು ಹಾಗೂ ಪದಾಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದರು.
ಸೋಮವಾರ ನಗರದಲ್ಲಿನ ಕೆ.ಎಸ್.ಈಶ್ವರಪ್ಪ ನಿವಾಸದಲ್ಲಿ ಏರ್ಪಡಿಸಿದ್ದ ಸಭೆಯಲ್ಲಿ ಕಾಗಿನೆಲೆ ಮಠದ ಶ್ರೀ ನಿರಂಜನಾನಂದಪುರಿ ಸ್ವಾಮಿ, ಮಾಜಿ ಸಚಿವ ಎಚ್.ಎಂ.ರೇವಣ್ಣ, ಹಿರಿಯ ಮುಖಂಡ ಕೆ.ವಿರುಪಾಕ್ಷಪ್ಪ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.
`ಎಸ್ಟಿ ಮೀಸಲಾತಿ ಹೋರಾಟದ ನೇತೃತ್ವವನ್ನು ಶ್ರೀಮಠ ನಿಭಾಯಿಸುತ್ತದೆ. ಅಲ್ಲದೆ, ಶಾಖಾ ಮಠ ಮತ್ತು ಶ್ರೀಮಠವು ಅತ್ಯಂತ ಕಾಳಜಿ ಪೂರಕವಾಗಿ ಈ ಕಾರ್ಯನಿರ್ವಹಿಸಲಿದೆ. ಪೀಠ ಸ್ಥಾಪಿಸಿದಾಗಲೇ ಇದರ ಬಗ್ಗೆ ಚಿಂತನೆ ಮಾಡಿದ್ದರೆ ಅವತ್ತಿಂದಲೇ ಹೊರಾಟ ಮಾಡಿ ಇಷ್ಟೊತ್ತಿಗಾಗಲೇ ಪಡೆದುಕೊಳ್ಳಬಹುದಾಗಿತ್ತು' ಎಂದು ಸ್ವಾಮೀಜಿಗಳು ಇದೇ ಸಂದರ್ಭದಲ್ಲಿ ತಿಳಿಸಿದರು.
`ನಮ್ಮ ಸಮಾಜದವರು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ದೌರ್ಜನ್ಯ ತಡೆ ಕಾಯ್ದೆ(ಎಸ್ಸಿ-ಎಸ್ಟಿ ಅಟ್ರಾಸಿಟಿ)ಯಡಿ ಕೇಸಗಳಲ್ಲೂ ತೊಂದರೆ ಅನುಭವಿಸಬೇಕಾಗಿ ಬಂದಿದೆ. ನಮ್ಮ ಮಕ್ಕಳಿಗೆ ಅಧ್ಯಯನಕ್ಕೆ ತುಂಬಾ ಅನುಕೂಲವಾಗುತ್ತದೆ. ಬೇರೆ ಯಾವುದೇ ಸಮಾಜದವರಿಗೆ ನೊವು ತೊಂದರೆ ಅಥವಾ ಅವರ ಸೌಲಭ್ಯಗಳನ್ನು ಕಸಿದುಕೊಳ್ಳುದಕ್ಕಲ್ಲ. ನಾವು ಹೊಗುವ ದಾರಿ ಸೂಕ್ಷ್ಮವಾಗಿ ಇರಬೇಕು. ನಮ್ಮ ಸಮಾಜ ಹುಚ್ಚು ಹುಡುಗರು ವಾಟ್ಸ್ ಅಪ್ ಫೇಸ್‍ಬುಕ್‍ನಲ್ಲಿ ಸಮಾಜದ ಮರ್ಯಾದೆ ಹರಾಜು ಮಾಡಬೇಡಿ ಎಂಬ ಕಳಕಳಿ ನಮ್ಮದು' ಎಂದು ಶ್ರೀಗಳು ತಿಳಿಸಿದರು.
ಎಚ್.ಎಂ.ರೇವಣ್ಣ ಮಾತನಾಡಿ, `ಸಮಾಜಕ್ಕೆ ಈ ಹಿಂದೆಯೇ ಪರಿಶಿಷ್ಟ ಪಂಗಡದ(ಎಸ್ಟಿ) ಮೀಸಲಾತಿ ದೊರಕಿಬೇಕಿತ್ತು. ಇಲ್ಲಿಯವರೆಗೂ ಸಾಕಷ್ಟು ಹೋರಾಟಗಳಾಗಿವೆ. ಈಗ ರಾಜ್ಯದಲ್ಲಿ ಮತ್ತು ಕೇಂದ್ರದಲ್ಲಿ ಒಂದೇ ಸರಕಾರ ಇರುವುದರಿಂದ ಈಗ ಕೆಲಸ ಇನ್ನಷ್ಟು ಸುಲಭವಾಗುತ್ತದೆ. ನಮಗೆಲ್ಲ ಇದರ ಅವಶ್ಯಕತೆ ಇದೆ. ಈಗ ನಾವು ಅತ್ಯಂತ ವ್ಯವಸ್ಥಿತವಾಗಿ ಹೋರಾಟ ಮಾಡಬೇಕಿದೆ' ಎಂದು ತಿಳಿಸಿದರು.
ಕೆ.ಎಸ್.ಈಶ್ವರಪ್ಪ ಮಾತನಾಡಿ, ಅ.11ಕ್ಕೆ ಚುನಾಯಿತ ಪ್ರತಿನಿಧಿಗಳ ಮತ್ತು ಸಹಕಾರಿಗಳ ಹಾಗೂ ಉಳಿದ ಚುನಾಯಿತ ಪ್ರತಿನಿಧಿಗಳ ಸಭೆ ಸಂಘದಿಂದ ನಿರ್ದೇಶಕರುಗಳು, ಜಿಲ್ಲಾ ನಾಯಕರುಗಳು ಸೇರಿ ಹೊರಾಟ ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಚರ್ಚಿಸಬೇಕು. ಯಾವುದೇ ಸಮಾಜಕ್ಕೂ ತೊಂದರೆ ಆಗದಂತೆ ಸ್ವಾಮೀಜಿಗಳ ಮಾರ್ಗದರ್ಶನದಲ್ಲಿ ಈ ಸಭೆ ನಡೆಯಲಿದೆ.
ಯಾವ ಯಾವ ಜಿಲ್ಲೆಯಿಂದ ಎಷ್ಟೆಷ್ಟು ಜನ ಆಗಮಿಸಲಿದ್ದಾರೆಂಬ ಬಗ್ಗೆ ಖಚಿತಪಡಿಸಿಕೊಳ್ಳಬೇಕು. ಹೋರಾಟ ರೂಪುರೇಷೆಗಳನ್ನು ಸಿದ್ಧಪಡಿಸುವ ಸಂಬಂಧ ಒಂದು ಸಮಿತಿ ರಚನೆ ಮಾಡಬೇಕು ಎಂದು ಸಲಹೆ ಮಾಡಿದರು.







