ಸಮನ್ವಯ ಕೊರತೆ: ರಾಜ್ಯದಲ್ಲಿ ಶೇ.23 ಸ್ಮಾರ್ಟ್ ಸಿಟಿ ಕಾಮಗಾರಿಗಳಷ್ಟೇ ಪೂರ್ಣ
ಬೆಂಗಳೂರು, ಅ.5: ಸ್ಮಾರ್ಟ್ ಸಿಟಿ ಯೋಜನೆಗೆ ಸಮನ್ವಯ ಕೊರತೆ ಎದುರಾಗಿದ್ದು, ಐದು ವರ್ಷಗಳಲ್ಲಿ ಮುಗಿಯಬೇಕಿದ್ದ 537 ಕಾಮಗಾರಿಗಳ ಪೈಕಿ ಈವರೆಗೆ ಕೇವಲ 124 ಕಾಮಗಾರಿಗಳಷ್ಟೇ ಪೂರ್ಣಗೊಂಡಿವೆ.
ಮೂಲಸೌಕರ್ಯ ಅಭಿವೃದ್ಧಿ, ತಂತ್ರಜ್ಞಾನ ಅಳವಡಿಕೆ, ಪರಿಸರ ಸಂರಕ್ಷಣೆಯಂತಹ ಅಂಶಯಗಳನ್ನಿಟ್ಟುಕೊಂಡು ಕೇಂದ್ರ ಸರಕಾರ ಸ್ಮಾರ್ಟ್ ಸಿಟಿ ಯೋಜನೆ ಜಾರಿಗೊಳಿಸಿದೆ. ರಾಜ್ಯದ 7 ನಗರಗಳು ಈ ಯೋಜನೆಯಡಿ ಆಯ್ಕೆಯಾಗಿದ್ದು, ಅವುಗಳಲ್ಲಿ ಸ್ಮಾರ್ಟ್ ರಸ್ತೆ ನಿರ್ಮಾಣ, ಸಮುದ್ರ ತೀರ, ನದಿ ಅಚ್ಚುಕಟ್ಟು ಪ್ರದೇಶಗಳ ಅಭಿವೃದ್ಧಿ, ಮಾರುಕಟ್ಟೆಗಳನ್ನು ಮೇಲ್ದರ್ಜೆಗೆ ಏರಿಸುವ ಹಲವು ಕಾಮಗಾರಿ ಕೈಗೆತ್ತಿಕೊಳ್ಳಲಾಗುತ್ತಿದೆ.
ಅದರಂತೆ ಏಳು ನಗರಗಳಲ್ಲಿ ಒಟ್ಟು 537 ಕಾಮಗಾರಿಗಳ ಅನುಷ್ಠಾನಕ್ಕೆ ನಿರ್ಧರಿಸಲಾಗಿದ್ದು, ಈವರೆಗೆ ಶೇ.23 ಕಾಮಗಾರಿಗಳಷ್ಟೇ ಪೂರ್ಣಗೊಂಡಿದೆ. ಉಳಿದ ಕಾಮಗಾರಿಗಳ ಅನುಷ್ಠಾನ, ಅನುಮೋದನೆ ಡಿಪಿಆರ್ ಹಂತದಲ್ಲಿವೆ.
ಸ್ಮಾರ್ಟ್ ಸಿಟಿ ಯೋಜನೆಯಲ್ಲಿನ ಕಾಮಗಾರಿಗಳ ಅನುಷ್ಠಾನಕ್ಕೆ ಸ್ಥಳೀಯ ನೀರು ಸರಬರಾಜು, ಒಎಫ್‍ಸಿ ಅಳವಡಿಕೆದಾರರು, ವಿದ್ಯುತ್ ಸರಬರಾಜು ಸಂಸ್ಥೆಗಳು ಸೇರಿ ಇನ್ನಿತರ ಸರಕಾರಿ ಮತ್ತು ಖಾಸಗಿ ಸಂಸ್ಥೆಗಳ ನೆರವಿನ ಅಗತ್ಯವಿದೆ. ಅವುಗಳು ಅಳವಡಿಸಿರುವ ಪೈಪ್, ತಂತಿಗಳು ಸೇರಿ ಇನ್ನಿತರ ಯುಟಿಲಿಟಿಗಳ ಸ್ಥಳಾಂತರ ವಿಳಂಬವಾಗುತ್ತಿದೆ. ಈ ವಿಚಾರದಲ್ಲಿ ಗುತ್ತಿಗೆ ಪಡೆದಿರುವ ಸಂಸ್ಥೆಗಳೊಂದಿಗೆ ಸಮನ್ವಯ ಸಾಧಿಸುವಲ್ಲಿ ಸಮಸ್ಯೆಗಳು ಎದುರಾಗಿದೆ.
7 ನಗರಗಳಲ್ಲಿ ಅನುಷ್ಠಾನ: ರಾಜ್ಯದ 7 ನಗರಗಳಲ್ಲಿ 8, 642.23 ಕೋಟಿ ರೂ.ಮೊತ್ತದ 537 ಯೋಜನೆಗಳ ಜಾರಿಗೆ ನಿರ್ಧರಿಸಲಾಗಿದೆ. ಅದರಲ್ಲಿ ಈಗಾಗಲೇ 310.97 ಕೋಟಿ ರೂ. ಮೊತ್ತದ 124 ಯೋಜನೆಗಳು ಅನುಷ್ಠಾನಗೊಂಡಿವೆ. ಉಳಿದಂತೆ 5,703.32 ಕೋಟಿ ರೂ. ಮೊತ್ತದ 334 ಯೋಜನೆಗಳ ಕಾಮಗಾರಿ ಚಾಲ್ತಿಯಲ್ಲಿದೆ. 1,653 ಕೋಟಿ ರೂ. ಮೊತ್ತದ 51 ಯೋಜನೆ ಟೆಂಡರ್ ಹಂತದಲ್ಲಿದ್ದರೆ, 974.69 ಕೋಟಿ ರೂ. ಮೊತ್ತದ 28 ಯೋಜನೆಗಳಿಗೆ ಡಿಪಿಆರ್ ಸಿದ್ಧಪಡಿಸಬೇಕಿದೆ.







