ಬಿಬಿಎಂಪಿ ವ್ಯಾಪ್ತಿಯಲ್ಲಿ ಶೌಚಾಲಯಗಳ ಕೊರತೆ: ಮಾಹಿತಿ ಕೇಳಿದ ಹೈಕೋರ್ಟ್

ಬೆಂಗಳೂರು, ಅ.5: ಸಾರ್ವಜನಿಕ ಶೌಚಾಲಯಗಳ ಕೊರತೆ, ಅಸಮರ್ಪಕ ನಿರ್ವಹಣೆ ಕುರಿತು ಸಲ್ಲಿಸಿದ್ದ ಅರ್ಜಿ ಸಂಬಂಧ ಬಿಬಿಎಂಪಿ ವ್ಯಾಪ್ತಿಯಲ್ಲಿ ಎಷ್ಟು ಶೌಚಾಲಯಗಳನ್ನು ನಿರ್ಮಾಣ ಮಾಡಲಾಗಿದೆ ಹಾಗೂ ಮಹಿಳೆಯರ ಬಳಕೆಗಾಗಿ ನಿರ್ಮಿಸಿರುವ ಸಾರ್ವಜನಿಕ ಶೌಚಾಲಯಗಳ ಬಗ್ಗೆ ಮಾಹಿತಿ ನೀಡಲು ಹೈಕೋರ್ಟ್ ಬಿಬಿಎಂಪಿಗೆ ಸೂಚಿಸಿದೆ.
ಈ ಕುರಿತು ಲೆಟ್ಜ್‍ಕಿಟ್ ಫೌಂಡೇಷನ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ ಹಾಗೂ ನ್ಯಾಯಮೂರ್ತಿ ಅಶೋಕ್ ಎಸ್. ಕಿಣಗಿ ಅವರಿದ್ದ ವಿಭಾಗೀಯ ನ್ಯಾಯಪೀಠದಲ್ಲಿ ನಡೆಯಿತು.
ಅರ್ಜಿದಾರರ ಪರ ವಾದಿಸಿದ ವಕೀಲರು, ಸ್ವಚ್ಛ ಭಾರತದ ಮಾನದಂಡಗಳ ಪ್ರಕಾರ ಬೆಂಗಳೂರು ನಗರದಲ್ಲಿ 1,100 ಶೌಚಾಲಯಗಳು ಇರಬೇಕು. ಪ್ರತಿ ಏಳು ಕಿ.ಮೀ ವ್ಯಾಪ್ತಿಯಲ್ಲಿ ಕನಿಷ್ಠ ಒಂದು ಸಾರ್ವಜನಿಕ ಶೌಚಾಲಯ ಇರಬೇಕು. ಆದರೆ, 1965 ರಿಂದ 2014ರವರೆಗೆ ಬರೀ 479 ಸಾರ್ವಜನಿಕ ಶೌಚಾಲಯಗಳನ್ನು ನಿರ್ಮಾಣ ಮಾಡಲಾಗಿದೆ. ಶೇ.50ರಷ್ಟು ಶೌಚಾಲಯಗಳು ಅಸಮರ್ಪಕ ನಿರ್ವಹಣೆಯಿಂದ ಕೂಡಿವೆ ಎಂದು ಪೀಠಕ್ಕೆ ತಿಳಿಸಿದರು.
ಮಾನವ ತ್ಯಾಜ್ಯವನ್ನು ಅನಿಲ ಹಾಗೂ ಗೊಬ್ಬರವಾಗಿ ಪರಿವರ್ತಿಸುವ ಮತ್ತು ಪರಿಸರ ಸ್ನೇಹಿ ಶೌಚಾಲಯಗಳನ್ನು ನಿರ್ಮಿಸುವ ಅಗತ್ಯವಿದೆ ಎಂದು ಪೀಠಕ್ಕೆ ತಿಳಿಸಿದರು.
ವಕೀಲರ ವಾದ ಆಲಿಸಿದ ನ್ಯಾಯಪೀಠವು ಬಿಬಿಎಂಪಿ ವ್ಯಾಪ್ತಿಯಲ್ಲಿ ಶೌಚಾಲಯಗಳ ನಿರ್ಮಾಣದ ಬಗ್ಗೆ ಮಾಹಿತಿ ನೀಡಲು ಬಿಬಿಎಂಪಿಗೆ ಸೂಚಿಸಿ, ವಿಚಾರಣೆಯನ್ನು ಮುಂದೂಡಿತು.







