ಯುಪಿ, ಬಿಹಾರಗಳ ಹಾಗೆ ಮಾಫಿಯಾ ರಾಜ್ಯವಾಗಿದೆ ಪಶ್ಚಿಮ ಬಂಗಾಳ ಎಂದ ಬಿಜೆಪಿ ರಾಜ್ಯಾಧ್ಯಕ್ಷ !

ಕೊಲ್ಕತ್ತಾ : ಪಶ್ಚಿಮ ಬಂಗಾಳದಲ್ಲಿ ಕಾನೂನು ಸುವ್ಯವಸ್ಥೆ ಹದಗೆಡುತ್ತಿದೆ ಹಾಗೂ ಅದು ಕ್ರಮೇಣವಾಗಿ ಉತ್ತರ ಪ್ರದೇಶ ಹಾಗೂ ಬಿಹಾರದ ಹಾಗೆ ಮಾಫಿಯಾ ರಾಜ್ಯವಾಗಿದೆ ಎಂದು ಪಶ್ಚಿಮ ಬಂಗಾಳ ಬಿಜೆಪಿ ಅಧ್ಯಕ್ಷ ದಿಲೀಪ್ ಘೋಷ್ ಹೇಳಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ತೃಣಮೂಲ ಕಾಂಗ್ರೆಸ್ ನಾಯಕ ಹಾಗೂ ಸಚಿವ ಫಿರ್ಹದ್ ಹಕೀಂ ''ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಮಾಫಿಯಾ-ರಾಜ್ ಇದೆಯೆಂಬುದನ್ನು ಅವರು ಒಪ್ಪಿಕೊಂಡಿರುವುದು ಒಳ್ಳೆಯದೇ ಆಯಿತು. ಒಮ್ಮೆಯಾದರೂ ಅವರು ಸತ್ಯ ಹೇಳಿದ್ದಾರೆಂಬ ಖುಷಿಯಿದೆ,'' ಎಂದಿದ್ದಾರೆ.
''ಪಶ್ಚಿಮ ಬಂಗಾಳವು ಉತ್ತರ ಪ್ರದೇಶ ಮತ್ತು ಬಿಹಾರಗಳಂತೆ ಮಾಫಿಯಾ-ರಾಜ್ ರೀತಿಯ ಪರಿಸ್ಥಿತಿಯತ್ತ ಜಾರುತ್ತಿದೆ. ಕೌನ್ಸಿಲರ್ ಒಬ್ಬರನ್ನು ಪೊಲೀಸ್ ಠಾಣೆಯ ಎದುರೇ ಸ್ಟೆನ್ ಗನ್ ಬಳಸಿ ಕೊಂದಿರುವುದು ನಾಚಿಕೆಗೇಡು,'' ಎಂದು ಬಿಜೆಪಿ ನಾಯಕ ಮನೀಶ್ ಶುಕ್ಲಾ ಅವರನ್ನು ತಿತಾಘರ್ ಎಂಬಲ್ಲಿ ಕಳೆದ ರವಿವಾರ ಹತ್ಯೆಗೈದ ಘಟನೆ ಕುರಿತು ಘೋಷ್ ಹೇಳಿದ್ದರು.
''ಬಂಗಾಳದ ಕಾನೂನು ಸುವ್ಯವಸ್ಥೆ ದಿನಕಳೆದ ಹಾಗೆ ಹದಗೆಡುತ್ತಿದೆ. ಶುಕ್ಲಾ ಅವರಂತಹ ಜನನಾಯಕನ ಹತ್ಯೆಯ ಹಿಂದಿನ ಸಂಚಿನಲ್ಲಿ ಪೊಲೀಸರು ಶಾಮೀಲಾಗಿದ್ದಾರೆ,'' ಎಂದೂ ಘೋಷ್ ಆರೋಪಿಸಿದರಲ್ಲದೆ ಇಂತಹ ಒಂದು ರಾಜ್ಯದಲ್ಲಿ ನ್ಯಾಯಯುತ ಚುನಾವಣೆ ನಡೆಯಬಹುದೇ ಎಂದು ಪ್ರಶ್ನಿಸಿದ್ದಾರೆ. ರಾಜ್ಯದಲ್ಲಿ ಕಳೆದ ಕೆಲ ವರ್ಷಗಳಲ್ಲಿ 120ಕ್ಕೂ ಅಧಿಕ ಬಿಜೆಪಿ ಕಾರ್ಯಕರ್ತರು ಹತ್ಯೆಗೀಡಾಗಿದ್ದಾರೆ'' ಎಂದು ಅವರು ಹೇಳಿದರು.







