ಹತ್ರಸ್ ಗೆ ತೆರಳುತ್ತಿದ್ದ ಪತ್ರಕರ್ತ, ಇತರ ಮೂರು ಮಂದಿಯನ್ನು ಬಂಧಿಸಿದ ಉತ್ತರಪ್ರದೇಶ ಪೊಲೀಸರು

ಹೊಸದಿಲ್ಲಿ, ಅ.6: ಕೇರಳ ಮೂಲದ ಜನಪ್ರಿಯ ವೆಬ್ಸೈಟ್ ಗಾಗಿ ಕೆಲಸ ಮಾಡುತ್ತಿರುವ ಪತ್ರಕರ್ತ ಹಾಗೂ ಇತರ ಮೂವರನ್ನು ಸೋಮವಾರ ಉತ್ತರಪ್ರದೇಶದ ಮಥುರಾದಲ್ಲಿ ಪಿಎಫ್ಐ ಸಂಘಟನೆಯೊಂದಿಗೆ ಸಂಪರ್ಕ ಹೊಂದಿರುವ ಆರೋಪದ ಮೇಲೆ ಪೊಲೀಸರು ಬಂಧಿಸಿದ್ದಾರೆ.
ಕಳೆದ ತಿಂಗಳು 20 ವರ್ಷದ ಯುವತಿಯ ಮೇಲೆ ನಡೆದಿದ್ದ ಅತ್ಯಾಚಾರ ಹಾಗೂ ಚಿತ್ರಹಿಂಸೆ ಪ್ರಕರಣದಿಂದ ಸುದ್ದಿಯಾಗಿರುವ ಹತ್ರಸ್ ಗೆ ಈ ನಾಲ್ವರು ದಿಲ್ಲಿಯಿಂದ ಕಾರಿನಲ್ಲಿ ತೆರಳುತ್ತಿದ್ದಾಗ ತಡೆದ ಪೊಲೀಸರು ಅವರನ್ನು ಬಂಧಿಸಿದ್ದಾರೆ.
ಕೆಲವು ಶಂಕಿತರು ದಿಲ್ಲಿಯಿಂದ ಹತ್ರಸ್ಗೆ ತೆರಳುತ್ತಿದ್ದಾರೆ ಎಂಬ ಮಾಹಿತಿಯ ಮೇರೆಗೆ ಟೋಲ್ಗೇಟ್ನಲ್ಲಿ ಅತೀಕ್-ಉರ್ ರೆಹಮಾನ್, ಸಿದ್ದೀಕ್ ಕಪ್ಪನ್, ಮಸೂದ್ ಅಹ್ಮದ್ ಹಾಗೂ ಆಲಂ ಹೆಸರಿನ ನಾಲ್ವರನ್ನು ತಡೆಯಲಾಗಿದ್ದು, ಅವರಿಂದ ಮೊಬೈಲ್ ಫೋನ್ಗಳು, ಲ್ಯಾಪ್ಟಾಪ್ ಹಾಗೂ ರಾಜ್ಯದಲ್ಲಿ ಶಾಂತಿ ಹಾಗೂ ಕಾನೂನು ಸುವ್ಯವಸ್ಥೆಯ ಮೇಲೆ ಪರಿಣಾಮಬೀರುವ ಬರಹವನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪತ್ರಕರ್ತ ಸಿದ್ದೀಕ್ ಕಪ್ಪನ್, ಹತ್ರಸ್ ನಲ್ಲಿರುವ ದಲಿತ ಯುವತಿ ವಾಸವಿರುವ ಪ್ರದೇಶದ ಪ್ರಸ್ತುತ ಪರಿಸ್ಥಿತಿಯನ್ನು ವರದಿ ಮಾಡಲು ಸೋಮವಾರ ಹತ್ರಸ್ಗೆ ತೆರಳಿದ್ದರು ಎಂದು ಕೇರಳದ ಕಾರ್ಯನಿರತ ಪತ್ರಕರ್ತರ ಸಂಘ ತಿಳಿಸಿದೆ. ಸಿದ್ದೀಕ್ ಅವರು ಪತ್ರಕರ್ತರ ದಿಲ್ಲಿ ಘಟಕ ಕಾರ್ಯದರ್ಶಿಯೂ ಆಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ.
ಆದಷ್ಟು ಬೇಗನೆ ಪತ್ರಕರ್ತನನ್ನು ಬಿಡುಗಡೆ ಮಾಡುವಂತೆ ಪತ್ರಕರ್ತರ ಸಂಘವು ಮುಖ್ಯಮಂತ್ರಿ ಆದಿತ್ಯನಾಥ್ ಅವರನ್ನು ಉದ್ದೇಶಿಸಿ ಬರೆದಿರುವ ಪತ್ರದಲ್ಲಿ ಆಗ್ರಹಿಸಿದೆ.
ಹತ್ರಸ್ ಟೋಲ್ ಪ್ಲಾಝಾದಲ್ಲಿ ಉತ್ತರಪ್ರದೇಶದ ಪೊಲೀಸರು ಸಿದ್ದೀಕ್ ರನ್ನು ವಶಕ್ಕೆ ಪಡೆದಿರುವ ವಿಚಾರ ನಮಗೆ ತಿಳಿದುಬಂದಿದೆ. ದಿಲ್ಲಿ ಮೂಲದ ಹಲವು ವಕೀಲರು ಅವರನ್ನು ಸಂಪರ್ಕಿಸಲು ಮಾಡಿದ ಪ್ರಯತ್ನಗಳು ಯಶಸ್ವಿಯಾಗಲಿಲ್ಲ. ಅವರನ್ನು ಕಸ್ಟಡಿಗೆ ಪಡೆದಿರುವ ಕುರಿತು ಹತ್ರಸ್ ಪೊಲೀಸ್ ಠಾಣೆ ಹಾಗೂ ರಾಜ್ಯ ಪೊಲೀಸ್ ಇಲಾಖೆ ನಮಗೆ ಯಾವುದೇ ಮಾಹಿತಿ ಒದಗಿಸಿಲ್ಲ ಎಂದು ಪತ್ರದಲ್ಲಿ ಬರೆಯಲಾಗಿದೆ.
ಸಿದ್ದೀಕ್ ಕೆಲಸ ಮಾಡುತ್ತಿರುವ ಮಲಯಾಳಂ ಜನಪ್ರಿಯ ವೆಬ್ಸೈಟ್ ನ ಸಂಪಾದಕ ಕೆ.ಎನ್. ಅಶೋಕನ್ ಅವರು ಎನ್ ಡಿ ಟಿವಿಯೊಂದಿಗೆ ಮಾತನಾಡುತ್ತಾ, ನಿನ್ನೆ(ಸೋಮವಾರ)ಬೆಳಗ್ಗೆ ಅವರು ಹತ್ರಸ್ಗೆ ಹೊರಟಿದ್ದರು. ಆದರೆ, ನಾವು ಅವರನ್ನು ಸಂಪರ್ಕಿಸಲು ಪ್ರಯತ್ನಿಸುತ್ತಿದ್ದೇವೆ. ಆದರೆ ಸಂಪರ್ಕ ಸಾಧ್ಯವಾಗಲಿಲ್ಲ. ಅವರ ಬಂಧನವು ವರದಿಯಿಂದ ತಿಳಿದುಬಂದಿದೆ ಎಂದು ಹೇಳಿದ್ದಾರೆ.







