ಸಿನೆಮಾ ಹಾಲ್‌ಗಳ ಪುನರಾರಂಭಕ್ಕೆ ಕೇಂದ್ರ ಸರಕಾರದ ಮಾರ್ಗಸೂಚಿ

ಹೊಸದೆಲ್ಲಿ,ಅ.6: ಅಕ್ಟೋಬರ್ 15ರಿಂದ ಪುನರಾರಂಭವಾಗಲಿರುವ ಸಿನಿಮಾ ಹಾಲ್‌ಗಳು ಹಾಗೂ ಮಲ್ಟಿಪ್ಲೆಕ್ಸ್‌ಗಳಿಗೆ ಕೇಂದ್ರ ಮಾಹಿತಿ ಹಾಗೂ ಪ್ರಸಾರ ಸಚಿವಾಲಯ ಮಂಗಳವಾರ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.
ಸಿನಿಮಾ ಹಾಲ್‌ಗಳಿಗೆ ಶೇ.50ರಷ್ಟು ಸಾಮರ್ಥ್ಯದೊಂದಿಗೆ ಕಾರ್ಯನಿರ್ವಹಿಸಲು ಅನುಮತಿ ನೀಡಲಾಗಿದ್ದು ಸುರಕ್ಷಿತ ಅಂತರಗಳ ನಿಯಮವನ್ನು ಪಾಲಿಸಬೇಕಾಗಿದೆ.
ಕೇಂದ್ರ ಸರಕಾರ ಸೆಪ್ಟೆಂಬರ್ 30ರಂದು 5ನೇ ಹಂತದ ಅನ್‌ಲಾಕ್ ಭಾಗವಾಗಿ ಸಿನೆಮಾ ಹಾಲ್‌ಗಳ ಪುನರಾರಂಭಕ್ಕೆ ಅವಕಾಶ ನೀಡಿತ್ತು. ಕೊರೋನ ಸಂಬಂಧಿತ ಸಾಮಾನ್ಯ ಮಾರ್ಗಸೂಚಿಗಳಾದ ಸುರಕ್ಷಿತ ಅಂತರ ಕಾಪಾಡುವಿಕೆ, ಮಾಸ್ಕ್ ಧಾರಣೆ ಹಾಗೂ ಸ್ಯಾನಿಟೈಸರ್‌ಗಳ ಬಳಕೆಯನ್ನು ಸಿನೆಮಾ ಹಾಲ್‌ಗಳಲ್ಲಿ ಪಾಲಿಸಬೇಕಾಗಿದೆ.
ಸಿನೆಮಾ ಹಾಲ್‌ಗಳಲ್ಲಿ ಸೀಟುಗಳನ್ನು ಆಕ್ರಮಿಸಿಕೊಳ್ಳುವಂತಿಲ್ಲ ಎಂಬ ಸಂದೇಶವನ್ನು ಹಾಕಬೇಕು. ಕಂಟೇನ್ಮಂಟ್ ರೆನ್‌ಗಳಲ್ಲಿ ಚಿತ್ರಗಳನ್ನು ಪ್ರದರ್ಶಿಸುವಂತಿಲ್ಲ. ಇನ್ನಷ್ಟು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲು ರಾಜ್ಯಗಳಿಗೆ ಅನುಮತಿ ನೀಡಲಾಗಿದೆ ಎಂದು ಸಚಿವಾಲಯ ತಿಳಿಸಿದೆ.
ಸಾಮಾನ್ಯ ಮಾರ್ಗಸೂಚಿ ಪ್ರಕಾರ ಮಾಸ್ಕ್ ಧರಿಸುವುದು ಕಡ್ಡಾಯಗೊಳಿಸಲಾಗಿದೆ. ಜನರು ಆರೋಗ್ಯಸೇತು ಆ್ಯಪ್ ಅಳವಡಿಸಿಕೊಂಡು ಬಳಸುವಂತೆ ಸಲಹೆ ನೀಡಲಾಗಿದೆ. ಕೇವಲ ಲಕ್ಷಣ ರಹಿತರಿಗೆ ಮಾತ್ರ ಸಿನೆಮಾ ಮಂದಿರದ ಆವರಣಕ್ಕೆ ಪ್ರವೇಶಿಸಲು ಅವಕಾಶವಿದೆ. ಪ್ರವೇಶದ್ವಾರದಲ್ಲಿ ಸಂದರ್ಶಕರು ಹಾಗೂ ಸಿಬ್ಬಂದಿಯನ್ನು ಥರ್ಮಲ್ ಸ್ಕಾನರ್‌ಗಳಿಂದ ಸ್ಕ್ರೀನಿಂಗ್ ಮಾಡಬೇಕು. ನಿರ್ಗಮನ ದ್ವಾರದಲ್ಲಿ ಹೆಚ್ಚು ಜನ ಸೇರದಂತೆ ನೋಡಿಕೊಳ್ಳಬೇಕು. ಕಟ್ಟಡದ ಪ್ರವೇಶ ಹಾಗೂ ನಿರ್ಗಮನ ಸ್ಥಳಗಳಲ್ಲಿ ಸರದಿ ಸಾಲುಗಳ ಚಿಹ್ನೆಗಳನ್ನು ಹಾಕಬೇಕು.
ಆಸನಗಳ ವ್ಯವಸ್ಥೆಗಳು : 1. ಸುರಕ್ಷಿತ ಅಂತರ ನಿಯಮಗಳನುಸಾರ ಆಸನಗಳ ವ್ಯವಸ್ಥೆಗಳನ್ನು ಮಾಡಬೇಕು. ಜನರು ಆಸನಗಳನ್ನು ಆಕ್ರಮಿಸುವುದನ್ನು ತಪ್ಪಿಸಲು ಆಸನ ಆಕ್ರಮಿಸುವಂತಿಲ್ಲ ಎಂಬ ಸಂದೇಶವನ್ನು ಬರೆದಿರಬೇಕು.
ಸುರಕ್ಷಿತ ಅಂತರ ನಿಯಮಗಳು :ಹಾಲ್‌ಗಳು, ಆವರಣಗಳು ಹಾಗೂ ಕಾರು ಪಾರ್ಕಿಂಗ್ ಸ್ಥಳಗಳಲ್ಲಿ ಸುರಕ್ಷಿತ ಅಂತರ ನಿಯಮಗಳನ್ನು ಪಾಲಿಸಬೇಕು. ಟಿಕೆಟ್ ಕೌಂಟರ್‌ಗಳಲ್ಲಿ ಜನದಟ್ಟಣೆ ತಪ್ಪಿಸಲು ಗುರುತುಗಳನ್ನು ಹಾಕಬೇಕು.
ಲಾಬಿಗಳು, ವಾಶ್‌ರೂಮ್‌ಗಳು ಹಾಗೂ ಸಾಮಾನ್ಯ ಪ್ರದೇಶಗಳಲ್ಲಿ ಜನದಟ್ಟಣೆ ಇರದಂತೆ ಖಚಿತಪಡಿಸಿಕೊಳ್ಳಬೇಕು. ಮಧ್ಯಂತರದಲ್ಲಿ ಪ್ರೇಕ್ಷಕರು ಹೊರಹೋಗದಂತೆ ಪ್ರೋತ್ಸಾಹಿಸಬೇಕು.
ಬುಕ್ಕಿಂಗ್ ಹಾಗೂ ಪೇಮೆಂಟ್:ಟಿಕೆಟ್‌ಗಳ ಕಾಯ್ದಿರಿಸಲು ಹಾಗೂ ಆಹಾರ ಮತ್ತು ಪಾನೀಯಗಳ ಖರೀದಿಸಲು ಡಿಜಿಟಲ್ ಮಾದರಿಯ ಪಾವತಿಗೆ ಆದ್ಯತೆ ನೀಡಬೇಕು.
ಸಂಪರ್ಕವನ್ನು ಪತ್ತೆಹಚ್ಚಲು ಪ್ರೇಕ್ಷಕರ ಮೊಬೈಲ್ ಸಂಖ್ಯೆಗಳನ್ನು ತೆಗೆದುಕೊಳ್ಳಬೇಕು.
ಜನದಟ್ಟಣೆ ತಪ್ಪಿಸಲು ದಿನಪೂರ್ತಿ ಸಿನೆಮಾ ಟಿಕೆಟ್ ಕೌಂಟರ್‌ಗಳನ್ನು ತೆರೆದಿಡಬೇಕು.







