ಆಯುಷ್ಮಾನ್ ಯೋಜನೆ ಅನುಷ್ಠಾನ ಗೊಂದಲ ನಿವಾರಣೆಗೆ ಶಾಸಕ ಯು.ಟಿ.ಖಾದರ್ ಒತ್ತಾಯ

ಮಂಗಳೂರು, ಅ.6: ಖಾಸಗಿ ಆಸ್ಪತ್ರೆಗಳಲ್ಲಿ ಆಯುಷ್ಮಾನ್ ಯೋಜನೆ ಅನುಷ್ಠಾನ ಸಂದರ್ಭ ಉಂಟಾಗುತ್ತಿರುವ ಗೊಂದಲ ನಿವಾರಿಸಲು ಡಿಸಿ ಕಚೇರಿ ಅಥವಾ ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿಯಲ್ಲಿ ಹೆಲ್ಫ್ ಲೈನ್ ಆರಂಭಿಸುವಂತೆ ಮಾಜಿ ಸಚಿವ, ಶಾಸಕ ಯು.ಟಿ.ಖಾದರ್ ಆಗ್ರಹಿಸಿದ್ದಾರೆ.
ಮಂಗಳವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆಯುಷ್ಮಾನ್ ಯೋಜನೆಯಲ್ಲಿ ಕೋವಿಡ್ ರೋಗಿಗಳಿಗೆ ಉಚಿತ ಚಿಕಿತ್ಸಾ ಸೌಲಭ್ಯವನ್ನು ಖಾಸಗಿ ಆಸ್ಪತ್ರೆಗಳಲ್ಲಿ ಏರ್ಪಡಿಸುವುದಾಗಿ ಜಿಲ್ಲಾ ಉಸ್ತುವಾರಿ ಸಚಿವರು ಹೇಳಿದ್ದರು. ಆಯುಷ್ಮಾನ್ ಯೋಜನೆ ಯಡಿ ಉಚಿತ ಚಿಕಿತ್ಸೆಗೆ ಖಾಸಗಿ ಮೆಡಿಕಲ್ ಕಾಲೇಜು ಮಾತ್ರವಲ್ಲದೆ, 73 ಖಾಸಗಿ ಆಸ್ಪತ್ರೆಗಳಿಗೆ ಅವಕಾಶ ನೀಡಲಾಗಿದೆ ಎಂದಿದ್ದಾರೆ. ಆದರೆ ಚಿಕಿತ್ಸೆ ಮತ್ತು ಬಿಲ್ ವಿಚಾರದಲ್ಲಿ ಗೊಂದಲ ಇನ್ನೂ ಮುಂದುವರಿದಿದೆ ಎಂದು ಅವರು ಹೇಳಿದರು.
ಆರೋಗ್ಯ ಸ್ಕೀಂ ಅನುಷ್ಠಾನ ವಿಚಾರದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಜಿಲ್ಲಾ ನೋಡೆಲ್ ಅಧಿಕಾರಿಗಳನ್ನು ದಿಢೀರನೆ ತೆಗೆದುಹಾಕಲಾಗಿದೆ. ಈಗ ಅವರ ಸ್ಥಾನಕ್ಕೆ ವೈದ್ಯರನ್ನು ನೇಮಕ ಮಾಡಲು ಸರ್ಕಾರ ಮುಂದಾಗಿದೆ. ಚಿಕಿತ್ಸೆ ನೀಡುವ ವೈದ್ಯರನ್ನು ಆಸ್ಪತ್ರೆ ಮತ್ತು ಜನಸಾಮಾನ್ಯರ ಕೊಂಡಿಯಾಗಿ ಬಳಸುವುದು ಸರಿಯಲ್ಲ ಆದ್ದರಿಂದ ಕೂಡಲೇ ನೋಡೆಲ್ ಅಧಿಕಾರಿ ಹುದ್ದೆಗೆ ವೈದ್ಯಕೇತರರನ್ನು ನೇಮಕ ಮಾಡಬೇಕು ಎಂದು ಅರು ಆಗ್ರಹಿಸಿದರು.
ಮಾಜಿ ಸಚಿವ ಅಭಯಚಂದ್ರ ಜೈನ್ ಮಾತನಾಡಿ, ಯು.ಟಿ.ಖಾದರ್ ಅವರು ಆರೋಗ್ಯ ಸಚಿವರಾಗಿದ್ದಾಗ ಇಲಾಖೆಗೆ ಕಾಯಕಲ್ಪ ನೀಡಿದ್ದರು. ಈಗ ಕೋವಿಡ್ ಸಮಯದಲ್ಲಿ ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿರುವ ವೈದ್ಯಕೀಯ ಸಿಬ್ಬಂದಿ ಮುಷ್ಕರ ನಡೆಸುತಿತಿದ್ದರೂ ಸರ್ಕಾರ ಸ್ಪಂದಿಸುತ್ತಿಲ್ಲ. ಖಾಸಗಿ ಆಸ್ಪತ್ರೆಗಳಲ್ಲಿ ಜನಸಾಮಾನ್ಯರು ಆರೋಗ್ಯ ಸ್ಕೀಂ ಅಡಿಯಲ್ಲೂ ಸುಲಭವಾಗಿ ಚಿಕಿತ್ಸೆ ಪಡೆಯಲು ಸಾಧ್ಯವಾಗುತ್ತಿಲ್ಲ ಎಂದು ತಮ್ಮ ಬಳಿಗೆ ಬಂದ ಬಡ ರೋಗಿಗಳ ಕೆಲ ಪ್ರಕರಣಗಳನ್ನು ಉಲ್ಲೇಖಿಸಿ ಅವರು ಅಸಮಾಧಾನ ವ್ಯಕ್ತಪಡಿಸಿದರು.
ಜನಪ್ರತಿನಿಧಿಗಳಾದ ನಮಗೆ ಜನರ ಋಣ ಇದೆ. ಅದನ್ನು ನಾವು ತೀರಿಸಬೇಕಿದೆ. ಈ ಸಂದರ್ಭದಲ್ಲಿ ಆರೋಗ್ಯ ಸಚಿವರು, ಶಾಸಕರು, ಉಸ್ತು ವಾರಿ ಸಚಿವರೆಲ್ಲರೂ ಯುದ್ದೋಪಾದಿಯಲ್ಲಿ ಕಾರ್ಯ ನಿರ್ವಹಿಸಬೇಕಾಗಿದೆ. ಸರಕಾರದ ಇಷ್ಟೆಲ್ಲಾ ಯೋಜನೆಗಳು ಇರುವಾಗ ಬಡ ರೋಗಿಗಳು ಮಾತ್ರ ಖಾಸಗಿ ಆಸ್ಪತ್ರೆಗಳಲ್ಲಿ ಬಿಲ್ ಕಟ್ಟಲಾಗದೆ ಪರದಾಡುತ್ತಿರುವ ಬಗ್ಗೆ ಜನಪ್ರತಿನಿಧಿಗಳು ಗಂಭೀರವಾಗಿ ಪರಿಗಣಿಸಬೇಕು ಎಂದು ಅಭಯ ಚಂದ್ರ ಜೈನ್ ಆಗ್ರಹಿಸಿದರು.







