ಆರೋಗ್ಯ ಇಲಾಖೆ : ಗುತ್ತಿಗೆ ನೌಕರರ ಪ್ರತಿಭಟನೆ 13ನೆ ದಿನಕ್ಕೆ

ಮಂಗಳೂರು, ಅ. 6: ಸಮಾನ ಕೆಲಸಕ್ಕೆ ಸಮಾನ ವೇತನ, ಸೇವಾ ಭದ್ರತೆ ಹಾಗೂ ಇತರ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಆರೋಗ್ಯ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆ ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರ ಸಂಘ ಸಂಯೋಜಿತ ಭಾರತೀಯ ಮಜ್ದೂರ್ ಸಂಘದ ದ.ಕ. ಜಿಲ್ಲಾ ಸಮಿತಿ ನೇತೃತ್ವದಲ್ಲಿ ಪ್ರತಿಭಟನಾ ಸಭೆ ಮಂಗಳವಾರ ನಗರದ ಮಿನಿವಿಧಾನಸೌಧ ಮುಂಭಾಗ ನಡೆಯಿತು.
ಸಮಾನ ಕೆಲಸಕ್ಕೆ ಸಮಾನ ವೇತನ ಹಾಗೂ ಸೇವಾ ಭದ್ರತೆ ಆಗ್ರಹಿಸಿ ಸೆ.24ರಿಂದ ಕೊರೊನಾ ವಾರಿಯರ್ಸ್‌ಗಳಿಂದ ನಡೆಯುತ್ತಿರುವ ಮುಷ್ಕರವು 13ನೇ ದಿನಕ್ಕೆ ಕಾಲಿಟ್ಟ ಹಿನ್ನೆಲೆಯಲ್ಲಿ ಸರಕಾರ ಯಾವುದೇ ವರದಿ ನೀಡದ ಹಿನ್ನೆಲೆಯಲ್ಲಿ ಪ್ರತಿಭಟನೆ ಆಯೋಜಿಸಲಾಗಿತ್ತು.
ಭಾರತೀಯ ಮಜ್ದೂರ್ ಸಂಘದ ರಾಜ್ಯ ಅಧ್ಯಕ್ಷ ವಿಶ್ವನಾಥ ಶೆಟ್ಟಿ ಮಾತನಾಡಿ, ಆರೋಗ್ಯ ಇಲಾಖೆಯ ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರನ್ನು ಸರಕಾರ ಬೀದಿಗಿಳಿಸಿದೆ. ನೌಕರರ ನೋವಿಗೆ ಕೊಂಚವೂ ಬೆಲೆ ನೀಡದ ಸರಕಾರ ವೌನ ವೃತ ಮಾಡುತ್ತಿದೆ. ವಿದ್ಯಾವಂತ ನೌಕರರನ್ನು ಸರಕಾರ ಬೀದಿಯಲ್ಲಿ ನಿಲ್ಲಿಸಿ ಅವರ ಬಾಳಿನಲ್ಲಿ ಚೆಲ್ಲಾಟವಾಡುತ್ತಿರವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.
ಕಾರ್ಮಿಕರ ಹಿತಚಿಂತನೆ ನಮ್ಮ ಗುರಿ ಎನ್ನುವ ರಾಜ್ಯ ಸರಕಾರವು ಕಾರ್ಮಿಕರ ಸಮಸ್ಯೆ ಈಡೇರಿಕೆಗೆ ಗಮನವೇ ನೀಡದೆ ಕೇವಲ ಘೋಷಣೆ, ಭರವಸೆಯಲ್ಲಿಯೇ ಬಾಕಿಯಾಗಿದೆ. ಈ ಬಾರಿ ಘೋಷಣೆ ಭರವಸೆ ಬೇಡ; ಬದಲಾಗಿ ಅನುಷ್ಠಾನ ಮಾಡಿ ಎಂಬ ಒಕ್ಕೊರಲಿನಿಂದ ಪ್ರತಿಭಟನೆ ಆಯೋಜಿಸುತ್ತಿದ್ದೇವೆ ಎಂದವರು ಹೇಳಿದರು.
ಭಾರತೀಯ ಮಜ್ದೂರ್ ಸಂಘದ ರಾಜ್ಯ ಉಪಾಧ್ಯಕ್ಷ ರತ್ನಾಕರ ದೇವಾಡಿಗ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಮೇಶ್, ಹಾಗೂ ಜಿಲ್ಲಾ ಆರೋಗ್ಯ ಇಲಾಖೆಯ ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.













