ಬೇಕಲ್ ಉಸ್ತಾದ್, ಮಣಿಪಾಲ ಉಸ್ತಾದ್ ಅನುಸ್ಮರಣೆ

ಮಂಗಳೂರು, ಅ.6: ಇತ್ತೀಚೆಗೆ ನಮ್ಮನ್ನಗಲಿದ ಸಂಯುಕ್ತ ಖಾಝಿ ಅಲ್‌ಹಾಜ್ ಇಬ್ರಾಹೀಂ ಮುಸ್ಲಿಯಾರ್ (ಬೇಕಲ ಉಸ್ತಾದ್) ಮತ್ತು ಹಾಜಿ ಪಿ.ಕೆ. ಅಬ್ದುಲ್ ರಹ್ಮಾನ್ ಮುಸ್ಲಿಯಾರ್ (ಮಣಿಪಾಲ ಉಸ್ತಾದ್) ಅವರ ಅನುಸ್ಮರಣೆಯು ಬ್ಯಾರಿ ಲೇಖಕರು-ಕಲಾವಿದರ ಕೂಟ (ಮೇಲ್ತೆನೆ)ದ ವತಿಯಿಂದ ದೇರಳಕಟ್ಟೆ-ನಾಟೆಕಲ್ ಸಮೀಪದ ವಿಜಯನಗರ ಬಳಿ ಜರುಗಿತು.
ಮೇಲ್ತೆನೆಯ ಗೌರವಾಧ್ಯಕ್ಷ ಆಲಿಕುಂಞಿ ಪಾರೆ ಮಾತನಾಡಿ ಬೇಕಲ ಉಸ್ತಾದ್ ನಡೆದಾಡುವ ಗ್ರಂಥಾಲಯದಂತ್ತಿದ್ದರು. ಜ್ಞಾನದ ಭಂಡಾರವಾ ಗಿದ್ದರು. ಧಾರ್ಮಿಕ ಮಾತ್ರವಲ್ಲ, ಸಾಮಾಜಿಕ ಚಟುವಟಿಕೆಯಲ್ಲೂ ಸಕ್ರಿಯರಾಗಿದ್ದರು. ಸೌಹಾರ್ದಕ್ಕೆ ಒತ್ತು ನೀಡುತ್ತಿದ್ದರು. ಅವರಲ್ಲಿ ಸದಾ ಸಮಯಪ್ರಜ್ಞೆ ಇತ್ತು ಎಂದು ಸ್ಮರಿಸಿದರು.
ಮಣಿಪಾಲ ಉಸ್ತಾದ್‌ರ ವಿದ್ವತ್ ಮತ್ತು ಖ್ಯಾತಿಯ ಬಗ್ಗೆ ಸ್ವತಃ ಮನೆಯವರಿಗೂ ತಿಳಿದಿರಲಿಲ್ಲ. ಅವರ ಅಗಲಿಕೆಯ ಬಳಿಕವೇ ಅವರ ಖ್ಯಾತಿ, ಜನಪ್ರೀತಿಯ ಬಗ್ಗೆ ನಮಗೆ ತಿಳಿಯಲು ಸಾಧ್ಯವಾಯಿತು ಎಂದು ಮಣಿಪಾಲ ಉಸ್ತಾದ್‌ರ ಪುತ್ರ, ಕವಿ ಬಶೀರ್ ಅಹ್ಮದ್ ಕಿನ್ಯ ಹೇಳಿದರು.
ಮೇಲ್ತೆನೆಯ ಅಧ್ಯಕ್ಷ ಇಸ್ಮಾಯಿಲ್ ಟಿ. ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಸಬೀಲುಲ್ ರಶಾದ್ ಇಸ್ಲಾಮಿಕ್ ಚಾರಿಟೇಬಲ್ ಟ್ರಸ್ಟ್‌ನ ಅಧ್ಯಕ್ಷ ಇಸ್ಮಾಯೀಲ್ ಎನ್., ಮೇಲ್ತೆನೆಯ ಪ್ರಧಾನ ಕಾರ್ಯದರ್ಶಿ ಮನ್ಸೂರ್ ಅಹ್ಮದ್ ಸಾಮಣಿಗೆ, ಉಪಾಧ್ಯಕ್ಷ ಮುಹಮ್ಮದ್ ಭಾಷಾ ನಾಟೆಕಲ್, ಸದಸ್ಯರಾದ ಹಂಝ ಮಲಾರ್, ಆಸೀಫ್ ಬಬ್ಬುಕಟ್ಟೆ ಉಪಸ್ಥಿತರಿದ್ದರು. ರಿಯಾಝ್ ಮಂಗಳೂರು ಕಾರ್ಯಕ್ರಮ ನಿರೂಪಿಸಿದರು.







