ಸ್ಯಾಂಡಲ್‍ವುಡ್ ಡ್ರಗ್ಸ್ ದಂಧೆ ಪ್ರಕರಣ: ಮುತ್ತಪ್ಪ ರೈ ಪುತ್ರ ಸಿಸಿಬಿ ವಶಕ್ಕೆ
ಬೆಂಗಳೂರು, ಅ.6: ಸ್ಯಾಂಡಲ್‍ವುಡ್ ಡ್ರಗ್ಸ್ ಪ್ರಕರಣಕ್ಕೆ ಸಂಬಂಧ ಮುತ್ತಪ್ಪ ರೈ ಪುತ್ರ ರಿಕ್ಕಿ ರೈ ಮನೆಯ ಮೇಲೆ ದಾಳಿ ನಡೆಸಿದ ಸಿಸಿಬಿ ಅಧಿಕಾರಿಗಳು, ಆತನನ್ನು ವಿಚಾರಣೆಗೊಳಪಡಿಸಿದರು.
ಮಂಗಳವಾರ ಇಲ್ಲಿನ ರಿಕ್ಕಿ ರೈಗೆ ಒಡೆತನದ ಬಿಡದಿ ಮತ್ತು ಬೆಂಗಳೂರಿನ ಮನೆ ಸೇರಿದಂತೆ ವಿವಿಧ ಕಡೆಗಳಲ್ಲಿ ದಾಳಿ ಮಾಡಿ ಶೋಧ ನಡೆಸಿದ ತನಿಖಾಧಿಕಾರಿಗಳು, ತದನಂತರ ಆತನನ್ನು ಕೆಲ ಕಾಲ ವಶಕ್ಕೆ ಪಡೆದು ವಿಚಾರಣೆ ನಡೆಸಿ, ಮಾಹಿತಿ ಸಂಗ್ರಹಿಸಿದರು.
ಇದೇ ಪ್ರಕರಣದ ಮತ್ತೋರ್ವ ಆರೋಪಿ ಆದಿತ್ಯ ಆಳ್ವಾ ಜೊತೆ ರಿಕ್ಕಿ ರೈ ನಂಟು ಹೊಂದಿದ್ದ ಎನ್ನಲಾಗುತ್ತಿದೆ. ಈ ಸಂಬಂಧ ತನಿಖೆ ಮುಂದುವರಿಸಲಾಗಿದೆ ಎಂದು ಸಿಸಿಬಿ ತಿಳಿಸಿದೆ.
ಸಾಕ್ಷ್ಯಾಧಾರಗಳ ಮೇಲೆ ದಾಳಿ: ಕೆಲವು ಸಾಕ್ಷ್ಯಾಧಾರಗಳ ಮೇಲೆ ದಾಳಿ ನಡೆಸಲಾಗಿದೆ. ಅಲ್ಲದೆ, ಆರೋಪಿ ಆದಿತ್ಯ ಆಳ್ವಾ ತಲೆಮರೆಸಿಕೊಂಡಿದ್ದ. ಈತನಿಗೆ ತಲೆಮರೆಸಿಕೊಳ್ಳಲು ರಿಕ್ಕಿ ರೈ ಸಹಾಯ ಮಾಡಿದ್ದ. ಸದ್ಯ ಕಾಟನ್‍ಪೇಟೆ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ಸಿಸಿಬಿ ಆಯುಕ್ತ ಸಂದೀಪ್ ಪಾಟೀಲ್ ತಿಳಿಸಿದ್ದಾರೆ.