ಎಸ್ಟಿ ಮೀಸಲಾತಿಗಾಗಿ ಹೋರಾಟ: ಅ.11ಕ್ಕೆ ಕುರುಬ ಸಮುದಾಯದ ಜನಪ್ರತಿನಿಧಿಗಳ ಸಭೆ

ಬೆಂಗಳೂರು, ಅ. 6: ರಾಜ್ಯದಲ್ಲಿರುವ ಕುರುಬ ಸಮುದಾಯವನ್ನು ಪರಿಶಿಷ್ಟ ಪಂಗಡ(ಎಸ್ಟಿ)ಕ್ಕೆ ಸೇರಿಸಬೇಕೆಂಬುದು ನಮ್ಮ ಸಮುದಾಯದ ಬಹಳ ದಿನಗಳ ಬೇಡಿಕೆ. ಆ ಹಿನ್ನೆಲೆಯಲ್ಲಿ ಹೋರಾಟ ರೂಪಿಸಲು ಅ.11ಕ್ಕೆ ಎಲ್ಲ ಪಕ್ಷಗಳ ಜನಪ್ರತಿನಿಧಿಗಳ ಸಭೆಯನ್ನು ಕರೆಯಲಾಗಿದೆ ಎಂದು ಕಾಗಿನೆಲೆ ಮಠದ ನಿರಂಜನಾನಂದ ಪುರಿ ಸ್ವಾಮೀಜಿ ತಿಳಿಸಿದ್ದಾರೆ.
ಮಂಗಳವಾರ ನಗರದಲ್ಲಿ ಎಸ್ಟಿ ಹೋರಾಟ ಸಮಿತಿಯಿಂದ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕುರುಬ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆ ಮಾಡುವುದರಿಂದ ಈಗಾಗಲೇ ಎಸ್ಟಿ ಪಟ್ಟಿಯಲ್ಲಿರುವ ಯಾವುದೇ ಸಮುದಾಯಕ್ಕೆ ನಮ್ಮಿಂದ ತೊಂದರೆ ಆಗುವುದಿಲ್ಲ. ಎಲ್ಲ ಹಿಂದುಳಿದ ಸಮುದಾಯಗಳನ್ನು ಮೇಲಕ್ಕೆತ್ತಬೇಕು ಎಂಬುದೇ ನಮ್ಮ ಉದ್ದೇಶ ಎಂದು ಸ್ಪಷ್ಟನೆ ನೀಡಿದರು.
ರಾಜ್ಯದಲ್ಲಿರುವ ಎಸ್ಟಿ ಸಮುದಾಯದ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಪ್ರಮಾಣವನ್ನು ಶೇ.3ರಿಂದ ಶೇ.7ಕ್ಕೆ ಹೆಚ್ಚಿಸಬೇಕೆಂಬ ಬೇಡಿಕೆ ಇದೆ. ಇದಕ್ಕೆ ನಮ್ಮ ಸಂಪೂರ್ಣ ಸಹಮತವಿದೆ ಎಂದ ಅವರು, ವಾಲ್ಮೀಕಿ ಸಮುದಾಯದ ಮೀಸಲಾತಿಗೆ ನಾವು ಯಾವುದೇ ತೊಂದರೆಯನ್ನುಂಟು ಮಾಡುವುದಿಲ್ಲ. ಹಿಂದುಳಿದ ವರ್ಗದ ನಮ್ಮ ಮೀಸಲಾತಿಯೊಂದಿಗೆ ನಾವು ಪರಿಶಿಷ್ಟ ಪಂಗಡ(ಎಸ್ಟಿ)ಕ್ಕೆ ಸೇರ್ಪಡೆಯಾಗಲು ಹೋರಾಟ ನಡೆಸಲಿದ್ದೇವೆ ಎಂದರು.
ಕುರುಬ ಸಮುದಾಯ ಬುಡಕಟ್ಟು ಜನಾಂಗವಾಗಿ ಗುರುತಿಸಿಕೊಂಡಿದೆ. ಬೀದರ್, ಕಲಬುರಗಿ, ಯಾದಗಿರಿ ಮೂರು ಜಿಲ್ಲೆಗಳಿಂದ ಈ ಸಮುದಾಯವನ್ನು ಎಸ್ಟಿಗೆ ಸೇರಿಸುವ ಪ್ರಸ್ತಾಪ ಕೇಂದ್ರ ಸರಕಾರಕ್ಕೆ ಹೋಗಿದೆ. ಕೊಡಗಿನ ಪ್ರಸ್ತಾಪ ವಾಪಸ್ ಬಂದಿದೆ. ಈ ಎರಡೂ ಪ್ರಸ್ತಾವನೆಗಳೊಂದಿಗೆ ಇಡೀ ಕರ್ನಾಟಕದ ಕುರುಬ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕು ಎಂದು ಒತ್ತಾಯಿಸಿ ಹೋರಾಟ ನಡೆಸಲು `ಕುರುಬ ಎಸ್ಟಿ ಹೋರಾಟ ಸಮಿತಿ' ರಚನೆ ಮಾಡಲಾಗಿದೆ ಎಂದು ಸ್ವಾಮೀಜಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿದ್ದ ಮಾಜಿ ಸಚಿವ ಎಚ್.ಎಂ.ರೇವಣ್ಣ ಮಾತನಾಡಿ, ಮೊದಲಿನಿಂದಲೂ ಎಸ್ಟಿಗೆ ಸೇರಿಸುವಂತೆ ಹೋರಾಟ ನಡೆಯುತ್ತಿದೆ. ರಾಜಕೀಯ ಇಚ್ಛಾಶಕ್ತಿಯ ಕೊರತೆಯಿಂದ ಅದು ಆಗಿರಲಿಲ್ಲ. ಇದೀಗ ಸಚಿವ ಕೆ.ಎಸ್.ಈಶ್ವರಪ್ಪ ಇದರ ನೇತೃತ್ವ ವಹಿಸಿದ್ದಾರೆ. ರಾಜ್ಯ, ಕೇಂದ್ರದಲ್ಲಿ ಬಿಜೆಪಿ ಸರಕಾರವಿದೆ. ನಮ್ಮ ಹಕ್ಕು ಪಡೆಯಲು ವೇದಿಕೆ ಮಾಡಿಕೊಂಡಿದ್ದೇವೆ ಎಂದರು.
ಈಶ್ವರಾನಂದಪುರಿ ಸ್ವಾಮಿ, ಸಿದ್ದರಾಮಾನಂದಪುರಿ ಸ್ವಾಮಿ, ಶಿವಾನಂದಪುರಿ ಸ್ವಾಮಿ, ಅಮರೇಶ್ವಸರ ಸ್ವಾಮಿ, ಮುಖಂಡರಾದ ಮುಕುಡಪ್ಪ, ರಘುನಾಥ ರಾವ್ ಮಲ್ಕಾಪುರೆ, ವಿರೂಪಾಕ್ಷಪ್ಪ, ವೆಂಕಟೇಶ್ ಮೂರ್ತಿ, ರಾಜೇಂದ್ರ ಸಣ್ಣಕ್ಕಿ, ಶಾಂತಮ್ಮ, ಪುಟ್ಟಸ್ವಾಮಿ ಸೇರಿದಂತೆ ಇನ್ನಿತರರು ಸುದ್ದಿಗೋಷ್ಟಿಯಲ್ಲಿ ಹಾಜರಿದ್ದರು.
ಅ.11ರಂದು ಸಭೆ
ರಾಜ್ಯ ಹಾಗೂ ಕೇಂದ್ರ ಸರಕಾರ ಕೇಳುವ ಅಂಶಗಳನ್ನು ಕೊಡುತ್ತೇವೆ. ಇನ್ನು ಕೆಲ ಹಿಂದುಳಿದ ವರ್ಗಗಳು ಬಂದು ನಮಗೂ ಬೆಂಬಲ ನೀಡಿ ಎನ್ನುತ್ತಿವೆ. ಕೋಲಿ, ಸವಿತಾ ಸಮಾಜ, ಕಾಡುಗೊಲ್ಲ ಸಮುದಾಯ ಸಹಕಾರ ಕೇಳುತ್ತಿವೆ. ಅವರಿಗೂ ನಾವು ಬೆಂಬಲ ನೀಡಲಿದ್ದೇವೆ. ಅ.11ರ ಬೆಳಗ್ಗೆ 11 ಗಂಟೆಗೆ ಅರಮನೆ ಮೈದಾನದಲ್ಲಿ ಸಮುದಾಯದ ಜನಪ್ರತಿನಿಧಿಗಳ ಸಭೆ ನಡೆಸಿ ಮುಂದಿನ ತೀರ್ಮಾನ ಮಾಡಲಾಗುವುದು.
-ಕೆ.ಎಸ್.ಈಶ್ವರಪ್ಪ, ಗ್ರಾಮೀಣಾಭೀವೃದ್ಧಿ ಸಚಿವ






.jpg)
.jpg)

