ಸಾಮಾಜಿಕ ಭದ್ರತೆ, ಪಿಂಚಣಿ ಯೋಜನೆ ಸಮಸ್ಯೆ ನಿವಾರಣೆಗೆ ದ.ಕ. ಡಿಸಿ ಸೂಚನೆ
ಮಂಗಳೂರು, ಅ.6: ಸಾಮಾಜಿಕ ಭದ್ರತಾ ಯೊಜನೆಗಳು ಪಿಂಚಣಿ ಪಾವತಿಗೆ ಬಡತನ ರೇಖೆಗಿಂತ ಕೆಳಗೆ ಇರುವ ಅಸಹಾಯಕ, ಅಶಕ್ತ ವ್ಯಕ್ತಿ, ವಿಧವೆಯರಿಗೆ ಹಾಗೂ ಅಂಗವಿಕಲರಿಗೆ ಮಾಸಿಕ ಪಿಂಚಣಿ ನೀಡುವಂತಹ ಮಹತ್ತರ ಯೋಜನೆಯಾಗಿದ್ದು, ಅವುಗಳ ಯಶಸ್ಸಿಗೆ ಅಡ್ಡಿಯಾಗು ತ್ತಿರುವ ಸಮಸ್ಯೆಗಳ ನಿವಾರಣೆಗೆ ದ.ಕ.ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ಸೂಚನೆ ನೀಡಿದ್ದಾರೆ.
ವೃದ್ದಾಪ್ಯ ವೇತನ, ವಿಧವಾವೆತನ, ಅಂಗವಿಕಲ ವೇತನ, ಸಂಧ್ಯಾಸುರಕ್ಷಾ ವೇತನ, ಮನಸ್ವಿನಿ ವೇತನ, ಮೈತ್ರಿ ವೇತನ, ಎಂಡೋಸಲ್ಫಾನ್ ವೇತನ, ಆತ್ಮಹತ್ಯೆ ಮಾಡಿಕೊಂಡ ರೈತರ ಪತ್ನಿಯರಿಗೆ ವಿಧವಾ ವೇತನ, ಆ್ಯಸಿಡ್ ದಾಳಿಗೆ ಒಳಗಾಗಿರುವ ಮಹಿಳೆಯರಿಗೆ ಮಾಶಾಸನ, ರಾಷ್ಟ್ರೀಯ ಕುಟುಂಬ ಸಹಾಯಧನ ಯೋಜನೆ, ಅಂತ್ಯಸಂಸ್ಕಾರ ಸಹಾಯಧನ ಯೋಜನೆ, ಆದರ್ಶ ವಿವಾಹ ಯೋಜನೆಗಳಲ್ಲಿ ಬಡತನ ರೇಖೆಗಿಂತ ಕೆಳಗೆ ಇರುವ ಅರ್ಹ ವ್ಯಕ್ತಿಗಳಿಗೆ ಮಾಶಾಸನ ಹಾಗೂ ಅನುದಾನಗಳನ್ನು ನೀಡಲಾಗುತ್ತಿದೆ.
ಪಿಂಚಣಿ ಯೋಜನೆಗಳಲ್ಲಿ 1,46,610 ಫಲಾನುಭವಿಗಳು ಪ್ರಯೋಜನವನ್ನು ಪ್ರತೀ ತಿಂಗಳು ಪಡೆದುಕೊಳ್ಳುತ್ತಿದ್ದಾರೆ. ಸೆಪ್ಟೆಂಬರ್ ಅಂತ್ಯಕ್ಕೆ ಜಿಲ್ಲೆಯಲ್ಲಿ 2,197 ಫಲಾನುಭಗಳಿಗೆ ಪಿಂಚಣಿ ಪಾವತಿಯಾಗದಿರುವುದು ಕಂಡುಬಂದಿದೆ. ಇದರಲ್ಲಿ 1,231 ಪ್ರಕರಣಗಳು ಸರಕಾರದ ಹಂತದಲ್ಲಿ ಅನುಮೋದನೆಗೆ ಬಾಕಿಯಾಗಿರುತ್ತದೆ. ಉಳಿದ 966 ಪ್ರಕಣಗಳಲ್ಲಿ ಫಲಾನುಭವಿಗಳ ಬ್ಯಾಂಕ್ ಖಾತೆ ಸಂಖ್ಯೆ ತಾಳೆಯಾಗ ದಿರುವುದರಿಂದ ಪಿಂಚಣಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಸೌಲಭ್ಯ ವಂಚಿತ ಫಲಾನುಭವಿಗಳು ಆಧಾರ್ ಕಾರ್ಡ್ ಪ್ರತಿ, ಬ್ಯಾಂಕ್ ಖಾತೆಯ ಪ್ರತಿ, ಪಿಂಚಣಿ ಮಂಜೂರಾತಿ ಆದೇಶದ ಪ್ರತಿಯನ್ನು ಸಂಬಂಧಪಟ್ಟ ಗ್ರಾಮಕರಣಿಕರಿಗೆ ಅಥವಾ ತಾಲೂಕು ಕಚೇರಿಯ ವಿಷಯ ನಿರ್ವಾಹಕರಿಗೆ ನೀಡಬೇಕು ಎಂದು ಡಿಸಿ ಸೂಚಿಸಿದ್ದಾರೆ.
ಪಿಂಚಣಿ ಪಾವತಿಯಾಗದಿರುವ ಫಲಾನುಭವಿಗಳ ಮಾಹಿತಿಯನ್ನು ಶೀಘ್ರವಾಗಿ ಸಂಗ್ರಹಿಸಿ ತಂತ್ರಾಂಶದಲ್ಲಿ ಅಳವಡಿಸಿ ಸರಕಾರಕ್ಕೆ ಸಲ್ಲಿಸಲು ತುರ್ತು ಕ್ರಮಕೈಗೊಂಡು ಪ್ರತೀಯೋರ್ವ ಫಲಾನುಭವಿಗೂ ಪಿಂಚಣಿ ಸಿಗುವಂತೆ ಕ್ರಮ ಕೈಗೊಳ್ಳಲಾಗುವುದು. ಪಿಂಚಣಿ ಪಾವತಿ ಬಗ್ಗೆ ಸಮಸ್ಯೆಗಳಿದ್ದಲ್ಲಿ ಜಿಲ್ಲಾಧಿಕಾರಿ ಕಚೇರಿಯ ಸಹಾಯಕ ನಿರ್ದೇಶಕ ಎ.ಡಿ. ಬೋಪಯ್ಯ (9448726160)ನ್ನು ಸಂಪರ್ಕಿಸಬಹುದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.







