ಎನ್‌ಎಚ್‌ಎಂ ನೌಕರರ ಮುಷ್ಕರ; ಅ.7ರಂದು ನಿರ್ಧಾರ
ಉಡುಪಿ, ಅ.6: ಸಮಾನ ಕೆಲಸ, ಸಮಾನ ವೇತನವೂ ಸೇರಿದಂತೆ ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕಳೆದ ಸೆ.24ರಿಂದ ಮುಷ್ಕರ ನಡೆಸಿರುವ ಕರ್ನಾಟಕ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಗುತ್ತಿಗೆ ಮತ್ತು ಹೊರ ಗುತ್ತಿಗೆ ನೌಕರರ ಸಂಘ 13 ದಿನಗಳ ಪ್ರತಿಭಟನೆಯನ್ನು ಮುಂದುವರಿಸಬೇಕೆ ಅಥವಾ ಇಲ್ಲಿಗೆ ಕೊನೆಗೊಳಿಸಿ ಕರ್ತವ್ಯಕ್ಕೆ ಹಾಜರಾಗಬೇಕೆ ಎಂಬ ಕುರಿತು ಅ.7ರಂದು ಬೆಳಗ್ಗೆ ನಿರ್ಧಾರ ಕೈಗೊಳ್ಳಲಿದೆ.
ರಾಷ್ಟ್ರೀಯ ಆರೋಗ್ಯ ಅಭಿಯಾನದ ಗುತ್ತಿಗೆ ಮತ್ತು ಹೊರಗುತ್ತಿಗೆ ನೌಕರರು ಹಾಗೂ ರಾಜ್ಯ ಸಂಘದ ಪದಾಧಿಕಾರಿಗಳು ಇಂದು ಬೆಂಗಳೂರಿ ನಲ್ಲಿ ರಾಜ್ಯ ಆರೋಗ್ಯ ಸಚಿವ ಶ್ರೀರಾಮುಲು ಅವರೊಂದಿಗೆ ಸುಧೀರ್ಘ ಮಾತುಕತೆ ನಡೆಸಿದ್ದು, ಕೆಲವು ಪ್ರಸ್ತಾಪಗಳೊಂದಿಗೆ ಮುಷ್ಕರವನ್ನು ಕೊನೆಗೊಳಿಸಿ ಸೇವೆಗೆ ಹಿಂದಿರುಗುವಂತೆ ಸಚಿವರು ಮನವಿ ಮಾಡಿದ್ದು, ನಾಳೆ ರಾಜ್ಯ ಸಂಘ ವಿವಿಧ ಜಿಲ್ಲಾ ಸಂಘಗಳ ಅಧ್ಯಕ್ಷರೊಂದಿಗೆ ಸಮಾ ಲೋಚನೆ ನಡೆಸಿ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಉಡುಪಿ ಜಿಲ್ಲಾ ಸಂಘದ ಖಜಾಂಚಿ ಗಿರೀಶ್ ಕೆ. ತಿಳಿಸಿದ್ದಾರೆ.
ಈಗಾಗಲೇ ಎನ್‌ಎಚ್‌ಎಂ ಗುತ್ತಿಗೆ ಮತ್ತು ಹೊರಗುತ್ತಿಗೆ ನೌಕರರ ಬೇಡಿಕೆಗಳ ಪರಿಶೀಲನೆಗೆ ಸರಕಾರ ಸಮಿತಿಯೊಂದನ್ನು ರಚಿಸಿದ್ದು, ಅದಕ್ಕೆ ಇನ್ನು ಮೂರು ತಿಂಗಳೊಳಗೆ ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ. ಅವರಿಂದ ವರದಿ ಪಡೆದ ಬಳಿಕ, ನಿಮ್ಮ ಬೇಡಿಕೆಗಳನ್ನು ಪರಿಶೀಲಿಸಿ ಕ್ರಮ ತೆಗೆದುಕೊಳ್ಳುವ ಭರವಸೆಯನ್ನು ಸಚಿವರು ನೀಡಿದ್ದಾರೆ ಎಂದು ಅವರು ಹೇಳಿದರು.
ಹೀಗಾಗಿ ರಾಜ್ಯ ಸಂಘದ ಸಭೆ ನಾಳೆ ಬೆಳಗ್ಗೆ ಬೆಂಗಳೂರಿನಲ್ಲಿ ನಡೆಯಲಿದ್ದು, ಇದರಲ್ಲಿ ಮುಷ್ಕರ ಮುಂದುವರಿಸಬೇಕೇ ಅಥವಾ ಸರಕಾರದ ಮನವಿಗೆ ಸ್ಪಂಧಿಸಿ ಕರ್ತವ್ಯಕ್ಕೆ ಹಾಜರಾಗಬೇಕೆ ಎಂಬುದರ ಬಗ್ಗೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಎಂದು ಅವರು ಹೇಳಿದರು.
ತಮ್ಮ ಬಹುಕಾಲದ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕೊರೋನ ವಾರಿಯಾರ್ ಆಗಿರುವ ರಾಜ್ಯದ ಸುಮಾರು 30,000 ಮಂದಿ ಹಾಗೂ ಜಿಲ್ಲೆಯ 512 ಮಂದಿ ಎನ್‌ಎಚ್‌ಎಂ ನೌಕರರು 24ರಿಂದ ಮುಷ್ಕರ ನಿರತರಾಗಿದ್ದಾರೆ. ಇದರಿಂದ ಜಿಲ್ಲಾ ಮಟ್ಟದ ಕೊರೋನ ಅಂಕಿ ಅಂಶ ಸಂಗ್ರಹಕ್ಕೆ ಹಿನ್ನಡೆಯಾಗಿದೆಯಲ್ಲದೇ ಸರಕಾರಿ ಆಸ್ಪತ್ರೆಗಳಲ್ಲಿ ದೈನಂದಿನ ಕಾರ್ಯಗಳು ಅಸ್ತವ್ಯಸ್ತಗೊಂಡಿವೆ.







