ಅಲ್ವಾರ್ ಸಾಮೂಹಿಕ ಅತ್ಯಾಚಾರ ಪ್ರಕರಣ: ನಾಲ್ವರಿಗೆ ಜೀವಾವಧಿ, ಒಬ್ಬನಿಗೆ 5 ವರ್ಷದ ಜೈಲುಶಿಕ್ಷೆ

ಜೈಪುರ, ಅ.6: ರಾಜಸ್ಥಾನದ ಅಲ್ವಾರ್‌ನಲ್ಲಿ ಕಳೆದ ವರ್ಷ 19 ವರ್ಷದ ದಲಿತ ಮಹಿಳೆಯ ಮೇಲೆ ನಡೆದಿದ್ದ ಸಾಮೂಹಿಕ ಅತ್ಯಾಚಾರ ಪ್ರಕರಣದ ವಿಚಾರಣೆ ನಡೆಸಿದ್ದ ವಿಶೇಷ ನ್ಯಾಯಾಲಯ ನಾಲ್ವರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಘೋಷಿಸಿದೆ. ಐದನೇ ಆರೋಪಿಗೆ ಐಟಿ ಕಾಯ್ದೆಯಡಿ 5 ವರ್ಷಗಳ ಕಠಿಣ ಶಿಕ್ಷೆ ವಿಧಿಸಿದೆ.
ನಾಲ್ವರು ಆರೋಪಿಗಳಾದ ಹನ್ಸ್‌ರಾಜ್ ಗುರ್ಜರ್, ಚೋಟೇಲಾಲ್ ಗುರ್ಜರ್, ಅಶೋಕ್ ಗುರ್ಜರ್ ಮತ್ತು ಇಂದ್ರಜ್ ಗುರ್ಜರ್‌ಗೆ ತಮ್ಮ ಸಹಜ ಜೀವಿತಾವಧಿಯ ಅಂತ್ಯದವರೆಗೂ ಜೈಲುವಾಸದ ಶಿಕ್ಷೆ ವಿಧಿಸಲಾಗಿದೆ. ಐದನೇ ಆರೋಪಿ ಮುಕೇಶ್ ಪ್ರಕರಣದ ವೀಡಿಯೊ ದೃಶ್ಯವನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಸಾರ ಮಾಡಿದ ಹಿನ್ನೆಲೆಯಲ್ಲಿ ಐಟಿ ಕಾಯ್ದೆಯಡಿ 5 ವರ್ಷಗಳ ಜೈಲುಶಿಕ್ಷೆಗೆ ಒಳಗಾಗಿದ್ದಾನೆ ಎಂದು ನ್ಯಾಯಾಲಯ ತಿಳಿಸಿದೆ.
2019ರ ಎಪ್ರಿಲ್ 26ರಂದು ತನ್ನ ಪತಿಯ ಜೊತೆ ತೆರಳುತ್ತಿದ್ದ 19 ವರ್ಷದ ಮಹಿಳೆಯನ್ನು ಬೈಕ್‌ನಲ್ಲಿ ಬಂದಿದ್ದ ಐವರು ಅಡ್ಡಗಟ್ಟಿ, ಇಬ್ಬರನ್ನೂ ರಸ್ತೆ ಬದಿಯ ಮರಳುದಿಬ್ಬದ ಹಿಂಭಾಗಕ್ಕೆ ಕರೆದೊಯ್ದಿದ್ದರು. ಅಲ್ಲಿ ಪತಿಯ ಎದುರಲ್ಲೇ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ್ದಲ್ಲದೆ ಈ ಕೃತ್ಯವನ್ನು ವೀಡಿಯೊ ರೆಕಾರ್ಡ್ ಮಾಡಿಕೊಂಡಿದ್ದರು. ಘಟನೆಯ ಬಗ್ಗೆ ಬಾಯಿಬಿಟ್ಟರೆ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಮಾಡುವುದಾಗಿ ಎಚ್ಚರಿಸಿದ್ದರಿಂದ ದಂಪತಿ ಈ ಬಗ್ಗೆ ದೂರು ನೀಡಿರಲಿಲ್ಲ. ಆದರೆ ಎಪ್ರಿಲ್ 28ರಂದು ಕರೆ ಮಾಡಿದ್ದ ಆರೋಪಿಗಳು, ತಕ್ಷಣ 10,000 ರೂ. ನೀಡಬೇಕು, ಇಲ್ಲದಿದ್ದರೆ ವೀಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಸಾರ ಮಾಡುವುದಾಗಿ ಬೆದರಿಸಿದ್ದಾರೆ ಎಂದು ಯುವತಿಯ ಮೈದುನ ಆರೋಪಿಸಿದ್ದಾನೆ.
ಎಪ್ರಿಲ್ 30ರಂದು ದಂಪತಿ ಪೊಲೀಸರಲ್ಲಿ ದೂರು ನೀಡಿದರೂ ಪೊಲೀಸರು ಉದ್ದೇಶಪೂರ್ವಕವಾಗಿ ನಿರ್ಲಕ್ಷ್ಯ ವಹಿಸಿದ್ದರು ಮತ್ತು ಆರೋಪಿಗಳನ್ನು ಬಂಧಿಸಲಿಲ್ಲ ಎಂದು ಆರೋಪಿಸಲಾಗಿದೆ. ಈ ಮಧ್ಯೆ, ಆರೋಪಿಗಳು ಅತ್ಯಾಚಾರ ಘಟನೆಯನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದಾಗ, ದೇಶದಾದ್ಯಂತ ವ್ಯಾಪಕ ಖಂಡನೆ ಮತ್ತು ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ಕಡೆಗೂ ಮೇ 2ರಂದು ಎಫ್‌ಐಆರ್ ದಾಖಲಿಸಿಕೊಂಡ ಪೊಲೀಸರು, ಮೇ 2 ಮತ್ತು 3ರಂದು ಮಹಿಳೆಯ ವೈದ್ಯಕೀಯ ಪರೀಕ್ಷೆ ನಡೆಸಿದ್ದಾರೆ ಎಂದು ಯುವತಿಯ ಪತಿ ಆರೋಪಿಸಿದ್ದಾನೆ. ಪ್ರಕರಣದ ವಿಚಾರಣೆ ನಡೆಸಿದ ವಿಶೇಷ ನ್ಯಾಯಾಲಯ ಮಂಗಳವಾರ ಶಿಕ್ಷೆಯ ಪ್ರಮಾಣ ಘೋಷಿಸಿದೆ.







