ಅಕ್ರಮ ಆಸ್ತಿ ಗಳಿಕೆ ಆರೋಪ: ಡಿ.ಕೆ.ಶಿವಕುಮಾರ್ ಗೆ ಸಮನ್ಸ್ ನೀಡಲು ಸಿಬಿಐ ಸಿದ್ಧತೆ

ಬೆಂಗಳೂರು, ಅ. 6: ಅಕ್ರಮ ಆಸ್ತಿ ಗಳಿಕೆ ಆರೋಪದ ಹಿನ್ನೆಲೆಯಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ನಿವಾಸದ ಮೇಲೆ ನಿನ್ನೆ ದಾಳಿ ನಡೆಸಿ, ವಶಪಡಿಸಿಕೊಂಡಿದ್ದ ದಾಖಲೆ ಪರಿಶೀಲನೆಯಲ್ಲಿ ತೊಡಗಿರುವ ಸಿಬಿಐ ಅಧಿಕಾರಿಗಳು, 74.93 ಕೋಟಿ ರೂಪಾಯಿ ಮೊತ್ತದ ಅಕ್ರಮ ಆಸ್ತಿ ಪತ್ತೆಗೆ ತನಿಖೆ ಮುಂದುವರಿಸಿದ್ದಾರೆ ಎಂದು ಗೊತ್ತಾಗಿದೆ.
ಚುನಾವಣಾ ಸಂದರ್ಭದಲ್ಲಿ ಚು.ಆಯೋಗಕ್ಕೆ ಶಿವಕುಮಾರ್ ಸಲ್ಲಿಸಿರುವ ಆಸ್ತಿ ವಿವರಕ್ಕೂ ಮತ್ತು ಆದಾಯ ತೆರಿಗೆ ಇಲಾಖೆ(ಐಟಿ) ಮತ್ತು ಜಾರಿ ನಿರ್ದೇಶನಾಲಯ(ಇಡಿ) ತನಿಖೆಯಿಂದ ಬೆಳಕಿಗೆ ಬಂದಿರುವ ಆದಾಯ ಮೂಲಕ್ಕೂ ವ್ಯತ್ಯಾಸವಿದೆ. ಆ ಹಿನ್ನೆಲೆಯಲ್ಲಿ ಡಿ.ಕೆ.ಶಿವಕುಮಾರ್ ಮತ್ತವರ ಕುಟುಂಬದ ಸದಸ್ಯರು ಸೇರಿದಂತೆ ಅವರ ಆಪ್ತರ ಆದಾಯದ ಮೂಲ ಪರಿಶೀಲನೆ ಕಾರ್ಯಕ್ಕೆ ಸಿಬಿಐ ಮುಂದಾಗಿದೆ ಎಂದು ತಿಳಿದು ಬಂದಿದೆ.
2013ರಲ್ಲಿ ಡಿ.ಕೆ.ಶಿವಕುಮಾರ್ ಅವರು ಚುನಾವಣಾ ಆಯೋಗಕ್ಕೆ ಸಲ್ಲಿಸಿದ ಪ್ರಮಾಣಪತ್ರದಲ್ಲಿ 33.92 ಕೋಟಿ ರೂ. ಮೊತ್ತದ ಆಸ್ತಿ ಹೊಂದಿದ್ದರು. ಆದರೆ, 2018ರ ವೇಳೆಗೆ ಅದು 162.53 ಕೋಟಿ ರೂಪಾಯಿಗಳಿಗೆ ಹೆಚ್ಚಳವಾಗಿದ್ದು, ಕೇವಲ ಐದು ವರ್ಷದ ಅವಧಿಯಲ್ಲಿ 128 ಕೋಟಿ ರೂ. ಮೊತ್ತದಷ್ಟು ಆಸ್ತಿ ಹೆಚ್ಚಳವಾಗಿತ್ತು. ಆದರೆ, ಶಿವಕುಮಾರ್ ಅವರ ಘೋಷಿತ ಆದಾಯಕ್ಕಿಂತ 74.93 ಕೋಟಿ ರೂ. ಮೊತ್ತದ ಹೆಚ್ಚಿನ ಅದಾಯ ಇರುವುದು ಸಿಬಿಐ ಪರಿಶೀಲನೆಯಿಂದ ಬಯಲಾಗಿತ್ತು. ಆ ಹಿನ್ನೆಲೆಯಲ್ಲಿ ದಾಳಿ ನಡೆಸಲಾಗಿತ್ತು ಎಂದು ಸಿಬಿಐ ಮೂಲಗಳು ತಿಳಿಸಿವೆ.
ಬೆಂಗಳೂರು, ಕನಕಪುರ, ಹೊಸದಿಲ್ಲಿ ಮುಂಬೈ ಸೇರಿದಂತೆ ಒಟ್ಟು 14 ಕಡೆಗಳಲ್ಲಿ ನಿನ್ನೆ ದಾಳಿ ನಡೆಸಿದ ಸಂದರ್ಭದಲ್ಲಿ ವಶಪಡಿಸಿಕೊಂಡಿದ್ದ ದಾಖಲೆಗಳು, ಬ್ಯಾಂಕ್ ಖಾತೆಗಳು ಹಾಗೂ ಕಂಪ್ಯೂಟರ್ ದಾಖಲೆಗಳನ್ನು ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ಅಲ್ಲದೆ, ಅದಾಯದ ಮೂಲದ ಬಗ್ಗೆ ಹೆಚ್ಚಿನ ವಿಚಾರಣೆಗಾಗಿ ಶಿವಕುಮಾರ್ ಅವರಿಗೆ ಸಮನ್ಸ್ ಜಾರಿ ಮಾಡಲು ಸಿಬಿಐ ಸಿದ್ಧತೆ ನಡೆಸಿದೆ ಎಂದು ತಿಳಿದು ಬಂದಿದೆ.
ಶಿವಕುಮಾರ್ ನೀಡುವ ಮಾಹಿತಿ ಹಾಗೂ ಆಸ್ತಿ ದಾಖಲೆಗಳ ಹೊಂದಾಣಿಕೆಯ ಬಗ್ಗೆ ಪರಿಶೀಲಿಸಿ ಸಿಬಿಐ ಮುಂದಿನ ಕ್ರಮ ಕೈಗೊಳ್ಳುವ ಸಾಧ್ಯತೆಗಳಿವೆ. ಆದರೆ, ಡಿ.ಕೆ.ಶಿವಕುಮಾರ್ ಅವರು ಸಿಬಿಐನ ಹಿಡಿತದಿಂದ ಪಾರಾಗಲು ಕಾನೂನು ತಜ್ಞರು, ಲೆಕ್ಕಪರಿಶೋಧಕರನ್ನು ಸಂಪರ್ಕಿಸಿದ್ದು ಸಿಬಿಐ ವಿಚಾರಣೆ ವೇಳೆ ತಮ್ಮ ಆಸ್ತಿಗೆ ಸಂಬಂಧಿಸಿದಂತೆ ಅಗತ್ಯ ದಾಖಲೆ ಸಂಗ್ರಹಿಸಲು ತಯಾರಿ ನಡೆಸಿದ್ದಾರೆಂದು ಮೂಲಗಳು ತಿಳಿಸಿವೆ.
ನಿರಾಳತೆ: ಸಿಬಿಐ ಅಧಿಕಾರಿಗಳ ದಿಢೀರ್ ದಾಳಿ ಹಿನ್ನೆಲೆಯಲ್ಲಿ ವಿಚಲಿತರಾಗಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಂದು ಕೊಂಚ ನಿರಾಳರಾಗಿದ್ದಂತೆ ಕಂಡುಬಂದರು. ಅಲ್ಲದೆ, ಬೆಳಗ್ಗೆಯೇ ಬೆಂಗಳೂರಿನಿಂದ ತುಮಕೂರಿನ ಶಿರಾ ಸಮೀಪದಲ್ಲಿರುವ ಪಟ್ಟದನಾಯಕನಹಳ್ಳಿ ಸ್ಫಟಿಕಪುರ ಮಠದ ಶ್ರೀ ನಂಜಾವಧೂತ ಸ್ವಾಮಿಗಳು ಹಾಗೂ ಆದಿಚುಂಚನಗಿರಿ ಮಠದ ಸ್ವಾಮೀಜಿ ನಿರ್ಮಲಾನಂದ ಸ್ವಾಮೀಜಿಗಳನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಿ ಬೆಂಗಳೂರಿಗೆ ಹಿಂದಿರುಗಿದರು.
ಸಂಜೆ ಇಲ್ಲಿನ ಕ್ವೀನ್ಸ್ ರಸ್ತೆಯಲ್ಲಿರುವ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಕಚೇರಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್, ಮಾಧ್ಯಮ ವಿಭಾಗದ ಮುಖ್ಯಸ್ಥ ಬಿ.ಎಲ್.ಶಂಕರ್ ಅವರೊಂದಿಗೆ ಸುದ್ದಿಗೋಷ್ಠಿಯನ್ನು ನಡೆಸಿದ ಶಿವಕುಮಾರ್ ಅವರು, ಭೂ ಸುಧಾರಣೆ ತಿದ್ದುಪಡಿ, ಎಪಿಎಂಸಿ ತಿದ್ದುಪಡಿ ಸೇರಿದಂತೆ ಕೇಂದ್ರ ಸರಕಾರದ ರೈತ ವಿರೋಧಿ ಧೋರಣೆ ಖಂಡಿಸಿ ಮಂಡ್ಯದಲ್ಲಿ ಅ.10ರಂದು ರೈತರ ಸಮ್ಮೇಳನ ನಡೆಸಲಾಗುವುದು ಪ್ರಕಟಿಸಿದರು.
ಸಿಬಿಐ ದಾಳಿ ರಾಜಕೀಯ ಪ್ರೇರಿತ ಎಂಬುದನ್ನು ತಿಳಿಯಬೇಕಾದರೆ ಸಿಬಿಐ ಎಫ್‍ಐಆರ್ ಪ್ರತಿಯನ್ನು ನೋಡಬೇಕು. ನನ್ನ ವಿರುದ್ಧ ಪ್ರಾಥಮಿಕ ತನಿಖೆ ನಡೆದಿದ್ದು ಯಾವಾಗ? ನಾನು ಕಾಂಗ್ರೆಸ್ ಪಕ್ಷದ ಅಧ್ಯಕ್ಷನಾಗಿದ್ದು ಯಾವಾಗ? ಎಫ್‍ಐಆರ್ ದಾಖಲಿಸಿದ್ದು ಯಾವಾಗ? ಎಂಬುದನ್ನು ಗಮನಿಸಿ. ಆಗ ಎಲ್ಲವೂ ಸ್ಪಷ್ಟವಾಗಲಿದೆ.'
-ಡಿ.ಕೆ.ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ
.jpg)







