ಗಾಂಜಾ ಮಾರಾಟ : ಓರ್ವನ ಬಂಧನ, ಓರ್ವ ಆರೋಪಿ ಪರಾರಿ
ಬಂಟ್ವಾಳ, ಅ. 6: ಬಂಟ್ವಾಳ ತಾಲೂಕಿನ ಬದನಾಜೆ ಬಸ್ ನಿಲ್ದಾಣದ ಬಳಿ ಅ. 5ರಂದು ಗಾಂಜಾ ಪೆಡ್ಲಿಂಗ್ ಮಾಡುತ್ತಿದ್ದ ವ್ಯಕ್ತಿಯೊರ್ವನನ್ನು ವಿಟ್ಲ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ವಿನೋದ್ ಎಸ್ ನೇತೃತ್ವದ ಪೊಲೀಸರ ತಂಡವು ಬಂಧಿಸಿದ್ದು 450 ಗ್ರಾಂ ಗಾಂಜಾವನ್ನು ವಶಕ್ಕೆ ಪಡೆಯಲಾಗಿದೆ ಎಂದು ವರದಿಯಾಗಿದೆ.
ಕಡಬದ ವಿದ್ಯಾಪುರ ನಿವಾಸಿ ಆಸಿಫ್ ಅಲಿಯಾಸ್ ಅಚಿ (30) ಬಂಧಿತ ಆರೋಪಿ. ಮತ್ತೋರ್ವ ಆರೋಪಿ ಕಂಬಳಬೆಟ್ಟುವಿನ ಹಾರಿಸ್ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ವಿಟ್ಲ ಸಬ್ ಇನ್ಸ್‌ಪೆಕ್ಟರ್ ವಿನೋದ್ ನೇತೃತ್ವದ ಪೊಲೀಸರ ತಂಡ ಕರ್ತವ್ಯದಲ್ಲಿದ್ದಾಗ ಆಸಿಫ್ ಬೈಕ್‌ನಲ್ಲಿ ಗಾಂಜಾವನ್ನು ಅಕ್ರಮವಾಗಿ ಸಾಗಿಸುತ್ತಿದ್ದಾನೆ ಎಂಬ ಮಾಹಿತಿ ದೊರಕಿದ್ದು, ಆತನನ್ನು ತಡೆದು ಪೊಲೀಸರು ವಿಚಾರಿಸಿದಾಗ ಕಂಬಳಬೆಟ್ಟುವಿನ ಹಾರಿಸ್ ನಿವಾಸದಲ್ಲಿ ಗಾಂಜಾವನ್ನು ಬಚ್ಚಿಡಲಾಗಿದೆ ಎಂದು ಆಸಿಫ್ ತಿಳಿಸಿದ್ದಾನೆ. ಪೊಲೀಸರು ಕೂಡಲೇ ಸ್ಥಳವನ್ನು ಪರಿಶೀಲನೆ ನಡೆಸಿದಾಗ 450 ಗ್ರಾಂ ಗಾಂಜಾ ಪತ್ತೆಯಾಗಿದೆ. ಸುಮಾರು 59,000 ರೂ.ಗಳ ಮೌಲ್ಯದ ಗಾಂಜಾ, ಬೈಕ್ ಹಾಗೂ ಇತರ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರೆದಿದೆ.





