ಹೆರಿಗೆ ಮಾಡಿಸಿದ ನಕಲಿ ವೈದ್ಯೆ: ತಾಯಿ- ಮಗು ಮೃತ್ಯು
ಪ್ರಕರಣ ಮುಚ್ಚಿಹಾಕಲು ಮೃತದೇಹಗಳನ್ನು ಕ್ಲಿನಿಕ್ನ ಹೊರಗೆ ಎಸೆದು ಆರೋಪಿ ಪರಾರಿ
ನೋಯ್ಡ, ಅ.7: ನಕಲಿ ವೈದ್ಯೆ ತನ್ನ ಕ್ಲಿನಿಕ್ನಲ್ಲಿ ಮಹಿಳೆಯೊಬ್ಬರ ಹೆರಿಗೆಗೆ ಪ್ರಯತ್ನಿಸಿ, ತಾಯಿ- ಮಗು ಮೃತಪಟ್ಟಿರುವ ಘಟನೆ ಇಲ್ಲಿನ ಮಮೂರಾ ಪ್ರದೇಶದಲ್ಲಿ ನಡೆದಿದೆ. ಪ್ರಕರಣವನ್ನು ಮುಚ್ಚಿಹಾಕಲು ಎರಡೂ ಮೃತದೇಹಗಳನ್ನು ಕ್ಲಿನಿಕ್ನ ಹೊರಗೆ ಎಸೆದಿರುವುದು ಬೆಳಕಿಗೆ ಬಂದಿದೆ.
ನಕಲಿ ವೈದ್ಯೆ ವಿರುದ್ಧ ನಿರ್ಲಕ್ಷ್ಯದಿಂದಾದ ಈ ಸಾವು ಸಂಭವಿಸಿರುವುದಾಗಿ ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿ ತಲೆಮರೆಸಿಕೊಂಡಿದ್ದಾಳೆ. ನಕಲಿ ವೈದ್ಯೆಯ ಪತ್ತೆಗೆ ಜಾಲ ಬೀಸಲಾಗಿದೆ ಎಂದು ಕೇಂದ್ರ ನೋಯ್ಡೆ ಹೆಚ್ಚುವರಿ ಡಿಸಿಪಿ ಅಂಕುರ್ ಅಗರ್ವಾಲ್ ಹೇಳಿದ್ದಾರೆ.
ಸೋಮವಾರ ಬೆಳಗ್ಗೆ ಖಾಸಗಿ ಕ್ಲಿನಿಕ್ನಲ್ಲಿ ಈ ಘಟನೆ ನಡೆದಿದ್ದು, ವೈದ್ಯೆಯ ವೈದ್ಯಕೀಯ ನೋಂದಣಿ ದೃಢಪಟ್ಟಿಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.
ಗರ್ಭಿಣಿ ಈ ಕ್ಲಿನಿಕ್ಗೆ ತೆರಳಿದ್ದು, ಮಹಿಳೆ ಹಾಗೂ ನವಜಾತ ಶಿಶು ಹೆರಿಗೆ ವೇಳೆ ಮೃಪಟ್ಟಿದ್ದಾರೆ. ಎರಡೂ ದೇಹಗಳನ್ನು ಕ್ಲಿನಿಕ್ನಿಂದ ಹೊರಕ್ಕೆ ಎಸೆದು ವೈದ್ಯೆ ಪರಾರಿಯಾಗಿದ್ದಾರೆ ಎಂದು ಅಗರ್ವಾಲ್ ವಿವರಿಸಿದ್ದಾರೆ.
ಪೊಲೀಸ್ ತಂಡ ಸ್ಥಳಕ್ಕೆ ಧಾವಿಸಿದರೂ, ಆ ವೇಳೆಗಾಗಲೇ ಕ್ಲಿನಿಕ್ ಮಾಲಕಿ ಪರಾರಿಯಾಗಿದ್ದಳು. ಮೃತ ಮಹಿಳೆಯ ಪತಿ ಖಾಸಗಿ ಕಂಪೆನಿಯಲ್ಲಿ ಉದ್ಯೋಗಿಯಾಗಿದ್ದು, ಮಮೂರಾ ಪ್ರದೇಶದಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದರು.
ಹೆರಿಗೆ ಮಾಡಿಸಿದ ಮಹಿಳೆ ನಕಲಿ ವೈದ್ಯೆಯಾಗಿದ್ದು, ವೈದ್ಯರಾಗಿ ನೋಂದಣಿ ಮಾಡಿಸಿಕೊಂಡಿರಲಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.