ಸಾರ್ವಜನಿಕ ಸ್ಥಳಗಳನ್ನು ಅನಿರ್ದಿಷ್ಟಾವಧಿ ಆಕ್ರಮಿಸಬಾರದು: ಶಾಹೀನ್ ಬಾಗ್ ಧರಣಿ ಕುರಿತು ಸುಪ್ರೀಂ
ಹೊಸದಿಲ್ಲಿ: ಸಾರ್ವಜನಿಕ ಸ್ಥಳಗಳನ್ನು ಅನಿರ್ದಿಷ್ಟಾವಧಿಗೆ ಆಕ್ರಮಿಸಬಾರದು. ಭಿನ್ನಾಭಿಪ್ರಾಯ ಹಾಗೂ ಪ್ರಜಾಪ್ರಭುತ್ವ ಜೊತೆ ಜೊತೆಯಾಗಿ ಸಾಗಬೇಕು ಎಂದು ಇಂದು ಬೆಳಗ್ಗೆ ಸುಪ್ರೀಂಕೋರ್ಟ್ ಒತ್ತಿ ಹೇಳಿದೆ.
ಈ ವರ್ಷಾರಂಭದಲ್ಲಿ ದಿಲ್ಲಿಯ ಶಾಹೀನ್ ಬಾಗ್ನಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ನಡೆದ ಪ್ರತಿಭಟನೆಯ ವಿರುದ್ಧ ಒಂದು ಗುಂಪು ಸಲ್ಲಿಸಿರುವ ಅರ್ಜಿಯ ವಿಚಾರಣೆಯ ವೇಳೆ ಸುಪ್ರೀಂಕೋರ್ಟ್ ಈ ರೀತಿ ಅವಲೋಕಿಸಿದೆ.
ಶಾಹೀನ್ ಬಾಗ್(ದಿಲ್ಲಿಯಲ್ಲಿ)ಅಥವಾ ಇನ್ಯಾವುದೋ ಸ್ಥಳಗಳಲ್ಲಿ ಸಾರ್ವಜನಿಕ ಸ್ಥಳಗಳನ್ನು ಅನಿರ್ದಿಷ್ಟವಾಗಿ ಆಕ್ರಮಿಸಲಾಗುವುದಿಲ್ಲ ಎಂದು ನಾವು ಇಂದು ಸ್ಪಷ್ಟಪಡಿಸಬೇಕಾಗಿದೆ. ಈ ರೀತಿಯ ಪ್ರತಿಭಟನೆಗಳು(ಶಾಹೀನ್ ಬಾಗ್ನಂತಹ)ಸ್ವೀಕಾರಾರ್ಹವಲ್ಲ ಹಾಗೂ ಅಧಿಕಾರಿಗಳು ಕಾರ್ಯನಿರ್ವಹಿಸಬೇಕು. ಇಂತಹ ಸ್ಥಳಗಳು ಅಡಚಣೆಯಿಂದ ಮುಕ್ತವಾಗಿದೆ ಎನ್ನುವುದನ್ನು ಖಚಿತಪಡಿಸಬೇಕು. ಆಡಳಿತವು ಪ್ರತಿಭಟನಾ ಸ್ಥಳಗಳನ್ನು ತೆರವುಗೊಳಿಸಲು ನ್ಯಾಯಾಲಯದ ಆದೇಶಗಳಿಗಾಗಿ ಕಾಯಬಾರದು. ಶಾಂತಿಯುತವಾಗಿ ಪ್ರತಿಭಟಿಸುವ ಹಕ್ಕನ್ನು ನಾವು ಪ್ರಶಂಸಿಸುತ್ತೇವೆ ಹಾಗೂ ಪ್ರತಿಭಟನೆಯನ್ನ್ನು ಗೊತ್ತುಪಡಿಸಿದ ಸ್ಥಳದಲ್ಲಿ ಮಾತ್ರ ಮಾಡಬೇಕು ಎಂದು ಸುಪ್ರೀಂಕೋರ್ಟ್ ತಿಳಿಸಿದೆ.
.