ಗೋವಾ ಸರಕಾರದ ಕ್ಯಾತೆ ರಾಜಕೀಯ ಪ್ರೇರಿತ: ಮಾಜಿ ಸಚಿವ ಎಂ.ಬಿ.ಪಾಟೀಲ್
ಮಹದಾಯಿ ನೀರು ಹಂಚಿಕೆ ವಿಚಾರ

ವಿಜಯಪುರ, ಅ.7: ಮಹದಾಯಿ ನದಿ ನೀರು ಹಂಚಿಕೆ ವಿಚಾರವಾಗಿ ಗೋವಾ ಸರಕಾರ ಮತ್ತೆ ಕ್ಯಾತೆ ತೆಗೆದಿರುವುದು ಅವರ ಜನರನ್ನು ಮತ್ತೆ ತಮ್ಮತ್ತ ಸೆಳೆಯುವ ಉದ್ದೇಶವಾಗಿದೆಯೇ ಹೊರತು ಮತ್ತೇನು ಹೊಸದಿಲ್ಲ ಎಂದು ಮಾಜಿ ಸಚಿವ ಎಂ.ಬಿ. ಪಾಟೀಲ್ ಹೇಳಿದ್ದಾರೆ.
ನಗರದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹದಾಯಿ ನೀರು ಹಂಚಿಕೆ ವಿಚಾರ ಸುಪ್ರೀಂಕೋರ್ಟ್‍ನಲ್ಲಿದ್ದಾಗ ಗೋವಾ ಸರಕಾರದವರು ವಾದ ಮಾಡದೆ ಸುಮ್ಮನಿದ್ದು, ಸಮ್ಮತಿ ಸೂಚಿಸಿದ್ದರು. ಈಗ ಮತ್ತೆ ವಿರೋಧ ವ್ಯಕ್ತಪಡಿಸುತ್ತಿರುವುದು ಹಾಸ್ಯಾಸ್ಪದವಾಗಿದೆ ಎಂದರು.
ಸುಪ್ರೀಂಕೋರ್ಟ್ ಈಗಾಗಲೇ ತೀರ್ಪು ಪ್ರಕಟಿಸಿದೆ. ಆ ಸಮಯದಲ್ಲೇ ಗೋವಾ ಸರಕಾರ ತೀರ್ಪು ಪ್ರಶ್ನಿಸಿ ನ್ಯಾಯಾಲಯಕ್ಕೆ ಹೋಗಬಹುದಿತ್ತು. ಅಂದು ಮೌನ ವಹಿಸಿ ಇಂದು ಮತ್ತೆ ಕೋರ್ಟಿಗೆ ಹೋಗಲು ಮುಂದಾಗಿರುವುದರಲ್ಲಿ ಯಾವುದೇ ಅರ್ಥವಿಲ್ಲ, ಇದು ರಾಜಕೀಯ ಪ್ರೇರಿತವಾಗಿದೆ ಎಂದು ತಿಳಿಸಿದರು.
ರಾಜಕೀಯ ಪ್ರೇರಿತ ದಾಳಿ: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ನಿವಾಸದ ಮೇಲೆ ಸಿಬಿಐ ನಡೆಸಿರುವ ದಾಳಿಯು ರಾಜಕೀಯ ಪ್ರೇರಿತವಾಗಿದೆ. ಶಿರಾ ಮತ್ತು ಬೆಂಗಳೂರಿನ ರಾಜರಾಜೇಶ್ವರಿ ನಗರದ ಉಪ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದ ಹೆಸರು ಹಾಳು ಮಾಡುವ ಸಲುವಾಗಿ ಬಿಜೆಪಿ ಈ ರೀತಿ ತನಿಖಾ ಸಂಸ್ಥೆಗಳನ್ನು ದುರುಪಯೋಗ ಮಾಡಿಕೊಳ್ಳುತ್ತಿದೆ ಎಂದು ಆರೋಪಿಸಿದರು.
ಈವರೆಗೆ ಎಷ್ಟು ಜನ ಬಿಜೆಪಿ ಮುಖಂಡರ ಮನೆ ಮೇಲೆ ದಾಳಿ ನಡೆದಿದೆ? ಬಿಜೆಪಿ ಹಿರಿಯ ಮುಖಂಡರ ಮೇಲೆ ಆರೋಪಗಳೇ ಇಲ್ಲವೇ? ಎಂದು ಅವರು ಪ್ರಶ್ನಿಸಿದರು. ಬಿಜೆಪಿ ಮುಖಂಡರ ನಿವಾಸದ ಮೇಲೆ ಏಕೆ ಸಿಬಿಐ ದಾಳಿ ನಡೆಸಿಲ್ಲ? ಈ ಹಿಂದೆ ಗುಜರಾತ್ ಶಾಸಕರು ಕರ್ನಾಟಕ ಆಶ್ರಯಿಸಿಕೊಂಡು ಬಂದಾಗ ಡಿ.ಕೆ.ಶಿವಕುಮಾರ್ ಅವರ ರಕ್ಷಣೆಗೆ ನಿಂತಿದ್ದರು. ಆ ವೇಳೆ ದಾಳಿ ನಡೆಸಲಾಗಿತ್ತು. ಸದ್ಯ ಉಪಚುನಾವಣೆ ಘೋಷಣೆ ಆಗುತ್ತಿದ್ದಂತೆ ಈ ರೀತಿ ತನಿಖಾ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಂಡು ಪ್ರತಿಪಕ್ಷ ಮುಖಂಡರ ಮನೆ ಮೇಲೆ ದಾಳಿ ನಡೆಸುತ್ತಿರುವುದು ರಾಜಕೀಯ ದುರುದ್ದೇಶವೇ ಹೊರತು ಮತ್ತೇನು ಅಲ್ಲ ಎಂದು ಅಸಮಾಧಾನ ಹೊರಹಾಕಿದರು.







