ಪ್ರಾಕೃತಿಕ ವಿಕೋಪ ಪರಿಹಾರಕ್ಕೆ ದಾಖಲೆಗಳು ಅಗತ್ಯ: ಮೋಹನ್‌ರಾಜ್
ಉಡುಪಿ ತಾಲೂಕು ಪಂಚಾಯತ್ ಸಾಮಾನ್ಯ ಸಭೆ
ಉಡುಪಿ, ಅ.7: ಪ್ರಾಕೃತಿಕ ವಿಕೋಪಕ್ಕೆ ಸಂಬಂಧಿಸಿದಂತೆ ಪರಿಹಾರ ಕಾರ್ಯ ವನ್ನು ಚುರುಕುಗೊಳಿಸಲಾಗಿದ್ದು, ಪರಿಹಾರ ಪಡೆಯಲು ಸಂತ್ರಸ್ತರು ಅಗತ್ಯ ದಾಖಲೆಗಳನ್ನು ಸಂಬಂಧಪಟ್ಟ ಅಧಿಕಾರಿಗಳಿಗೆ ಸಲ್ಲಿಸಬೇಕು ಎಂದು ಉಡುಪಿ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಾರಿ ಮೋಹನ್‌ರಾಜ್ ತಿಳಿಸಿದ್ದಾರೆ.
ಉಡುಪಿ ತಾಲೂಕು ಪಂಚಾಯತ್ ಅಧ್ಯಕ್ಷೆ ಸಂಧ್ಯಾ ಕಾಮತ್ ಅಧ್ಯಕ್ಷತೆ ಯಲ್ಲಿ ಬುಧವಾರ ತಾಪಂ ಸಭಾಂಗಣದಲ್ಲಿ ನಡೆದ ತಾಪಂ ಸಾಮಾನ್ಯ ಸಭೆ ಯಲ್ಲಿ ಅವರು ಮಾತನಾಡುತಿದ್ದರು.
ಪ್ರವಾಹ ಪೀಡಿತ ಪ್ರದೇಶಗಳಿಗೆ ತಹಶೀಲ್ದಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ, ಕೆಲವು ಮನೆಗಳಲ್ಲಿ ಹಾನಿ ಕಂಡುಬರುತ್ತಿದೆ. ಇಂತಹ ಮನೆಗಳಿಗೆ ಹೇಗೆ ಪರಿಹಾರ ನೀಡಲಾಗುತ್ತದೆ ಎಂದು ಸದಸ್ಯರು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಮೋಹನ್‌ರಾಜ್, ಸಂತ್ರಸ್ತರು ಹಾನಿಗೆ ಸಂಬಂಧಿಸಿದ ಪೋಟೋಗಳನ್ನು ತಹಶೀಲ್ದಾರ್‌ಗೆ ಸಲ್ಲಿಸಬೇಕು. ಆ ಬಳಿಕ ಅವರು ಅದನ್ನು ಪರಿಶೀಲಿಸಿ ಪರಿಹಾರ ಮೊತ್ತವನ್ನು ನಿರ್ಧರಿಸಲಿದ್ದಾರೆ ಎಂದರು.
ಪ್ರವಾಹದಿಂದ ತಾಲೂಕಿನ ಕೆಲವೆಡೆ ಪಂಪ್‌ಸೆಟ್‌ಗಳು ಸಹಿತ ಇತರ ಸೊತ್ತು ಗಳಿಗೆ ಹಾನಿಯಾಗಿದ್ದು, ಅಂತಹ ಸಂತ್ರಸ್ತರಿಗೆ 10 ಸಾವಿರ ರೂ. ಪರಿಹಾರ ನೀಡಲು ಅವಕಾಶ ಇದೆ. ಸರಕಾರ ಪರಿಹಾರ ಮೊತ್ತವನ್ನು ಬಿಡುಗಡೆ ಮಾಡಿದ ಕೂಡಲೇ ಸಂತ್ರಸ್ತರಿಗೆ ಪರಿಹಾರ ವಿತರಣೆ ಕಾರ್ಯ ನಡೆಸಲಾಗುವುದು ಎಂದು ಕಂದಾಯ ಅಧಿಕಾರಿಗಳು ಸಭೆಗೆ ತಿಳಿಸಿದರು.
ತ್ಯಾಜ್ಯ ಘಟಕಕ್ಕೆ ಮೀಸಲು: ಕೆಳಾರ್ಕಳಬೆಟ್ಟುವಿನಲ್ಲಿ ಹಿಂದೂ ರುದ್ರ ಭೂಮಿ, ಸರಕಾರಿ ಶಾಲೆ ಮತ್ತು ಅಂಗನವಾಡಿ ಭವನಕ್ಕೆ ಜಾಗ ಮೀಸಲಿರಿ ಸಿರುವುದರ ಪ್ರಗತಿಯ ಬಗ್ಗೆ ಸದಸ್ಯ ಧನಂಜಯ ಕುಂದರ್ ಸಭೆಯಲ್ಲಿ ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಧಿಕಾರಿಗಳು, ಕೆಳಾರ್ಕಳಬೆಟ್ಟು ಗ್ರಾಮ ದಲ್ಲಿ 20 ಸೆಂಟ್ಸ್ ಜಮೀನನ್ನು ಎಸ್‌ಎಲ್‌ಆರ್‌ಎಂ ಘಟಕಕ್ಕೆ ಕಾಯ್ದಿರಿಸಲು ಕುಂದಾಪುರದ ಸಹಾಯಕ ಕಮೀಷನರ್‌ಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.
ಕಲ್ಯಾಣಪುರ ಗ್ರಾಪಂ ವ್ಯಾಪ್ತಿಯ ನಿಡಂಬಳ್ಳಿಯಲ್ಲಿ ನರೇಗಾದಡಿ ನಡೆಸಿದ ಅಂಗನವಾಡಿಗೆ ಸಂಬಂಧಿಸಿದ ಕಾಮಗಾರಿಯ ಕೂಲಿಯನ್ನು ಫಲಾನುಭವಿ ಗಳಿಗೆ ಪಾವತಿಸಲು ವಿಳಂಬ ಮಾಡಲಾಗುತ್ತಿದೆ ಎಂದು ಧನಂಜಯ್ ಕುಂದರ್ ಆರೋಪಿಸಿದರು. ನರೇಗಾದಡಿ ಕಾಮಗಾರಿ ನಡೆಸಿದ ಪ್ರಕಾರ ಕೂಲಿ ಗಾರರ ಖಾತೆಗೆ ಕೂಲಿ ಪಾವತಿಸಲಾಗಿದ್ದು, ಇದರಲ್ಲಿ ಯಾವುದೇ ವಿಳಂಬ ಮಾಡಿಲ್ಲ ಎಂದು ಅಧಿಕಾರಿಗಳು ಸ್ಪಷ್ಟನೆ ನೀಡಿದರು.
ಸದಸ್ಯ ರಾಜೇಂದ್ರ ಪಿ. ಮಾತನಾಡಿ, ಅಂಬಲಪಾಡಿ ಗ್ರಾಪಂ ವ್ಯಾಪ್ತಿಯ ಪಂದುಬೆಟ್ಟುವಿನಲ್ಲಿ ಅಪಾಯಕಾರಿ ಮರ ತೆರವಿನ ಬಗ್ಗೆ ಅರಣ್ಯ ಇಲಾಖೆ ಹಾಗೂ ಕಲ್ಕುಡ ಪರಿಸರದ 20 ಮನೆಗಳಿಗೆ ಹಳೆ ವಿದ್ಯುತ್ ತಂತಿಗಳು ಜೋತು ಬಿದ್ದು ಮತ್ತು ಸಿಂಗಲ್ ಫೇಸ್‌ನಿಂದ ವಿದ್ಯುತ್ ಸಂಪರ್ಕ ಹೊಂದಿರುವುದರಿಂದ ಲೋ ವೋಲ್ಟೇಜ್ ಸಮಸ್ಯೆ ಎುರಿಸುತ್ತಿದ್ದಾರೆ ಎಂದು ದೂರಿದರು.
ಸಭೆಯಲ್ಲಿ ತಾಪಂ ಉಪಾಧ್ಯಕ್ಷ ಶರತ್ ಬೈಲಕೆರೆ, ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷೆ ಶಿಲ್ಪಾ ರವೀಂದ್ರ ಉಪಸ್ಥಿತರಿದ್ದರು.







