ಹತ್ರಸ್ ದಲಿತ ಯುವತಿಯ ಅತ್ಯಾಚಾರ, ಕೊಲೆ: ಬ್ರಹ್ಮಾವರದಲ್ಲಿ ಸಮತಾ ಸೈನಿಕ ದಳದಿಂದ ಪ್ರತಿಭಟನೆ
ಆರೋಪಿಗಳ ಪ್ರತಿಕೃತಿ ದಹನ

ಬ್ರಹ್ಮಾವರ, ಅ.7: ಉತ್ತರ ಪ್ರದೇಶದ ಹಾಥರಸ್‌ನಲ್ಲಿ ದಲಿತ ಯುವತಿಯೊಬ್ಬಳ ಅತ್ಯಾಚಾರ-ಹತ್ಯೆ ಪ್ರಕರಣವನ್ನು ವಿರೋಧಿಸಿ ಸಮತಾ ಸೈನಿಕ ದಳ ಉಡುಪಿ ಜಿಲ್ಲಾ ಸಮಿತಿ ವತಿಯಿಂದ ಮಂಗಳವಾರ ಸಂಜೆ ಬ್ರಹ್ಮಾವರ ಬಸ್‌ನಿಲ್ದಾಣದ ಬಳಿ ಪ್ರತಿಭಟನೆ ನಡೆಯಿತು.
ಈ ಸಂದರ್ಭದಲ್ಲಿ ಪ್ರತಿಭಟನಕಾರರನ್ನುದ್ದೇಶಿಸಿ ಮಾತನಾಡಿದ ಸಮತಾ ಸೈನಿಕ ದಳದ ಜಿಲ್ಲಾ ಅಧ್ಯಕ್ಷ ವಿಶ್ವನಾಥ್ ಪೇತ್ರಿ, ಕಾವಿ ಹಾಕಿಕೊಂಡ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ರಾಜ್ಯದಲ್ಲಿ ಹೆಣ್ಣು ಮಕ್ಕಳಿಗೆ ಭದ್ರತೆ ಇಲ್ಲದಂತಾಗಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ತಕ್ಷಣವೇ ಉತ್ತರ ಪ್ರದೇಶ ಸರಕಾರವನ್ನು ವಜಾ ಮಾಡಬೇಕು ಎಂದು ಅವರು ಒತ್ತಾಯಿಸಿದರು.
ಸಭೆಯಲ್ಲಿ ಸರಕಾರಗಳ ದಲಿತ ವಿರೋಧಿ ನೀತಿ, ಉತ್ತರ ಪ್ರದೇಶ ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗಲಾಯಿತು. ಬಳಿಕ ಅತ್ಯಾಚಾರ ಗೈದ ನಾಲ್ವರು ಆರೋಪಿಗಳ ಪ್ರತಿಕೃತಿಯ ದಹನ ಮಾಡಲಾಯಿತು.
ಪ್ರತಿಭಟನೆಯಲ್ಲಿ ಸಮತಾ ಸೈನಿಕ ದಳದ ಪ್ರಧಾನ ಕಾರ್ಯದರ್ಶಿ ಸುಧಾಕರ ಸುರ್ಗೋಳಿ, ಕೋಶಾಧಿಕಾರಿ ಮಂಜುನಾಥ್ ಮಧುವನ, ಮಹಿಳಾ ಘಟಕದ ಜಿಲ್ಲಾ ಅಧ್ಯಕ್ಷೆ ಜ್ಯೋತಿ ಶಿರಿಯಾರ ಮತ್ತು ಭೀಮ್ ಆರ್ಮಿಯ ವಿಘ್ನೇಶ್ ಬ್ರಹ್ಮಾವರ ಮುಂತಾದವರು ಪಾಲ್ಗೊಂಡಿದ್ದರು.









