ಉಡುಪಿ : ಕೊರೋನಕ್ಕೆ ಇಂದು ಇಬ್ಬರು ಬಲಿ, ಮೃತರ ಸಂಖ್ಯೆ 162ಕ್ಕೆ ಏರಿಕೆ
207 ಮಂದಿಗೆ ಕೊರೋನ ಸೋಂಕು

ಉಡುಪಿ, ಅ. 7: ಜಿಲ್ಲೆಯಲ್ಲಿ ಬುಧವಾರ ಹೊಸದಾಗಿ 207 ಮಂದಿಯಲ್ಲಿ ಕೊರೋನ ಸೋಂಕು ದೃಢಪಟ್ಟಿದೆ ಎಂದು ರಾಜ್ಯ ಆರೋಗ್ಯ ಇಲಾಖೆ ಇಂದು ರಾತ್ರಿ ಪ್ರಕಟಿಸಿದ ಕೋವಿಡ್- 19 ರಾಜ್ಯ ಬುಲೆಟಿನ್‌ನಲ್ಲಿ ತಿಳಿಸಿದೆ. ಇದರಿಂದ ಜಿಲ್ಲೆಯಲ್ಲಿ ಈವರೆಗೆ ಕೊರೋನಕ್ಕೆ ಪಾಸಿಟಿವ್ ಆದವರ ಸಂಖ್ಯೆ 18,569ಕ್ಕೇರಿದೆ.
ಇಂದು ಪಾಸಿಟಿವ್ ಬಂದವರಲ್ಲಿ 10 ಮಂದಿ 10 ವರ್ಷದೊಳಗಿನ ಬಾಲಕರು ಸೇರಿದಂತೆ 114 ಮಂದಿ ಪುರುಷರು ಹಾಗೂ ಎಂಟು ಮಂದಿ ಬಾಲಕಿಯರು ಸೇರಿದಂತೆ 93 ಮಂದಿ ಮಹಿಳೆಯರು ಸೇರಿದ್ದಾರೆ. 60 ವರ್ಷ ಮೇಲಿನ 34 (23+11) ಮಂದಿ ಹಿರಿಯ ನಾಗರಿಕರು ಇವರಲ್ಲಿ ಸೇರಿದ್ದಾರೆ. ಉಡುಪಿ ತಾಲೂಕಿನ 103, ಕುಂದಾಪುರ ತಾಲೂಕಿನ 49 ಹಾಗೂ ಕಾರ್ಕಳ ತಾಲೂಕಿನ 55 ಮಂದಿ ಬುಧವಾರ ಪಾಸಿಟಿವ್ ಬಂದಿದ್ದಾರೆ.
ಅಲ್ಲದೇ ದಿನದಲ್ಲಿ 185 ಮಂದಿ ಸೋಂಕಿನಿಂದ ಗುಣಮುಖರಾಗಿ ಕೋವಿಡ್ ಆಸ್ಪತ್ರೆಗಳಿಂದ ಬಿಡುಗಡೆಗೊಂಡಿದ್ದು, ಹೀಗೆ ಮನೆಗೆ ತೆರಳಿದವರ ಒಟ್ಟು ಸಂಖ್ಯೆ 16,313ಕ್ಕೇರಿದೆ. ಜಿಲ್ಲೆಯಲ್ಲಿ ಸದ್ಯ 2095 ಸಕ್ರೀಯ ಕೋವಿಡ್ ಪ್ರಕರಣಗಳಿವೆ.
ಬುಧವಾರ ಜಿಲ್ಲೆಯಲ್ಲಿ ಇಬ್ಬರು ಕೋವಿಡ್ ಸೋಂಕಿನಿಂದ ಮೃತಪಟ್ಟಿದ್ದಾರೆ. ಈ ಮೂಲಕ ಜಿಲ್ಲೆಯಲ್ಲಿ ಈವರೆಗೆ ಕೋವಿಡ್‌ಗೆ ಬಲಿಯಾದವರ ಒಟ್ಟು ಸಂಖ್ಯೆ 162ಕ್ಕೇರಿದೆ. 56 ವರ್ಷದ ಪುರುಷ ಸೆ. 22ರಂದು ಮೃತಪಟ್ಟರೆ, 64 ವರ್ಷ ಪ್ರಾಯದ ಮಹಿಳೆ ಇಂದು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಏರಿಕೆ-ಇಳಿಕೆ
ಜಿಲ್ಲೆಯಲ್ಲಿ ಕೋವಿಡ್-19ರಿಂದ ಚೇತರಿಸಿಕೊಳ್ಳುತ್ತಿರುವವರ ಪ್ರಮಾಣದಲ್ಲಿ ಇನ್ನಷ್ಟು ಏರಿಕೆ ಕಂಡುಬಂದಿದ್ದರೆ, ಮೃತರ ಪ್ರಮಾಣ ಇಳಿಮುಖದತ್ತ ಸಾಗುತ್ತಿದೆ ಎಂಬುದು ಇಂದಿನವರೆಗಿನ ಅಂಕಿಅಂಶಗಳ ಪರಿಶೀಲನೆಯಿಂದ ತಿಳಿದುಬರುತ್ತದೆ.
ಜಿಲ್ಲೆಯಲ್ಲಿ ಇಂದಿನವರೆಗೆ ಒಟ್ಟು 18569 ಪಾಸಿಟಿವ್ ಕೇಸುಗಳಿದ್ದು, ಇವುಗಳಲ್ಲಿ ಇಂದು ಸಂಜೆಯವರೆಗೆ ಒಟ್ಟು 16313 ಮಂದಿ ಚಿಕಿತ್ಸೆಯ ಬಳಿಕ ಚೇತರಿಸಿಕೊಂಡಿದ್ದಾರೆ. ಇದು ಒಟ್ಟಾರೆ ಕೇಸಿನ ಶೇ.87.9 ಆಗಿದೆ. ಸುಮಾರು ಒಂದು ತಿಂಗಳ ಹಿಂದೆ ಈ ಪ್ರಮಾಣ ಶೇ.86.74 ಆಗಿತ್ತು.
ಅದೇ ರೀತಿ ಕೋವಿಡ್‌ನಿಂದ ಸತ್ತವರ ಸಂಖ್ಯೆ ಇಂದು ಸಂಜೆಯವರೆಗೆ ಅಧಿಕೃತವಾಗಿ 162 ಆಗಿದೆ. ಇದು ಒಟ್ಟು ಕೇಸಿನ ಶೇ.0.87 ಆಗಿದೆ. ಒಂದು ತಿಂಗಳ ಹಿಂದೆ ಇದು ಶೇ.0.93 ಆಗಿತ್ತು. ಜಿಲ್ಲೆಯಲ್ಲಿಂದು 2095 ಸಕ್ರಿಯ ಪ್ರಕರಣಗಳಿದ್ದು, ಇದು ಒಟ್ಟು ಕೇಸಿನ ಶೇ.11.28 ಆಗಿದೆ.







