ಸ್ಕ್ರಾಚ್ ಕೂಪನ್ ಹೆಸರಿನಲ್ಲಿ 26 ಲಕ್ಷ ರೂ. ವಂಚನೆ: ದೂರು
ಉಡುಪಿ, ಅ.7: ಸ್ಕ್ರಾಚ್ ಕೂಪನ್‌ನಲ್ಲಿ 12 ಲಕ್ಷ ರೂ. ವಿಜೇತರಾಗಿರುವು ದನ್ನು ನಂಬಿ ವ್ಯಕ್ತಿಯೊಬ್ಬರು 26.47ಲಕ್ಷ ರೂ. ಕಳೆದುಕೊಂಡು ಮೋಸ ಹೋಗಿರುವ ಬಗ್ಗೆ ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೆ.ನಾಗರಾಜ್ ಭಟ್ ಎಂಬರಿಗೆ ನ್ಯಾಪ್ಟಾಲ್ ಕಂಪೆನಿಯ ಹೆಸರಿನಲ್ಲಿ ಒಂದು ಸ್ಕ್ರಾಚ್ ಕೂಪನ್ 2019ರ ಮಾ.29ರಂದು ಅಂಚೆ ಮೂಲಕ ಬಂದಿದ್ದು, ಅದರಲ್ಲಿ 12 ಲಕ್ಷ ವಿಜೇತರಾಗಿದ್ದೀರಿ ಎಂಬುದಾಗಿ ನಮೂದಿಸಲಾಗಿತ್ತು. ಪತ್ರದಲ್ಲಿದ್ದ ಮೊಬೈಲ್ ನಂಬರ್‌ಗೆ ಕರೆ ಮಾಡಿದಾಗ ಹಣ ಪಡೆಯಲು ರಿಜಿಸ್ಟ್ರೇಶನ್ ಚಾರ್ಜ್ 12ಸಾವಿರ ರೂ. ಪಾವತಿಸುವಂತೆ ತಿಳಿಸಿದ್ದರು. ಹಾಗೆ ಇವರು ಎ.4ರಂದು ಆ ಹಣ ಪಾವತಿಸಿದ್ದರು.
ನಂತರದ ದಿನಗಳಲ್ಲಿ ಅಮಿತ್ ಬಿಸ್ವಾಸ ಹಾಗೂ ಚೇತನ್ ಕುಮಾರ್ ಎಂಬ ಹೆಸರು ಹೇಳಿಕೊಂಡು ಕರೆ ಮಾಡಿ, ಹಣವನ್ನು ಪಡೆಯಲು ಜಿಎಸ್ಟಿ, ತೆರಿಗೆ, ವೆರಿಫಿಕೇಶ್ ಚಾರ್ಜ್, ಸಬ್ ಚಾರ್ಜ್ ಪಾವತಿಸುವಂತೆ ತಿಳಿಸಿದ್ದರು. ಹೀಗೆ ಇವರು ಎ.4ರಿಂದ ಜು.28ರ ಮಧ್ಯಾವದಿಯಲ್ಲಿ ಒಟ್ಟು 26,47,650ರೂ. ಹಣವನ್ನು ಆರೋಪಿಗಳ ವಿವಿಧ ಬ್ಯಾಂಕ್ ಖಾತೆಗಳಿಗೆ ಜಮೆ ಮಾಡಿ ವಂಚನೆಗೆ ಒಳಗಾಗಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.





