ದ.ಕ. ಜಿಲ್ಲೆಯ 422 ಗ್ರಾಮಗಳ ಆಕಾರ ಬಂದ್ ಗಣಕೀಕೃತ ಕಾರ್ಯ ಆರಂಭ
ಭೂ ದಾಖಲೆಗಳ ಉಪನಿರ್ದೇಶಕ
ಮಂಗಳೂರು, ಅ.7:ದ.ಕ. ಜಿಲ್ಲೆಯ ಭೂಮಾಪನ ಇಲಾಖೆಯಡಿ ಭೂದಾಖಲೆಗಳ ಉಪ ನಿರ್ದೇಶಕರ ಮತ್ತು ಸಹಾಯಕ ನಿರ್ದೇಶಕರ ಕಚೇರಿಗಳಲ್ಲಿ ಜಿಲ್ಲೆಯ 7 ತಾಲೂಕಿನ 422 ಗ್ರಾಮಗಳ ಭೌತಿಕ ಆಕಾರ ಬಂದ್‌ಗಳನ್ನು ಗಣಕೀಕೃತಗೊಳಿಸುವ ಕಾರ್ಯ ಆರಂಭಗೊಂಡಿದ್ದು, ಪ್ರಗತಿಯಲ್ಲಿದೆ ಎಂದು ಭೂ ದಾಖಲೆಗಳ ಉಪನಿರ್ದೇಶಕರ ಪ್ರಕಟನೆ ತಿಳಿಸಿದೆ.
ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಇಲಾಖೆಯ ಆಯುಕ್ತರು ವಿಡಿಯೋ ಕಾನ್ಪರೆನ್ಸ್ ನಡೆಸಿ ಪ್ರಗತಿ ಪರಿಶೀಲನೆ ಮಾಡಿ ದ್ದಾರೆ. ಈ ಸಂದರ್ಭ 422 ಗ್ರಾಮಗಳ ಪೈಕಿ ಕೇವಲ 30 ಗ್ರಾಮಗಳಲ್ಲಿ ಮಾತ್ರ ಆಕಾರಬಂದ್ ಗಣಕೀಕೃತಗೊಂಡಿರುವುದನ್ನು ತಿಳಿದುಕೊಂಡು ಅ.12ರೊಳಗೆ ಜಿಲ್ಲಾವಾರು ಗುರಿ ನಿಗದಿಪಡಿಸಿರುತ್ತಾರೆ. ಅದರಂತೆ ಜಿಲ್ಲೆಯ 7 ತಾಲೂಕುಗಳ 112 ಗ್ರಾಮಗಳ ಗುರಿ ನಿಗದಿಪಡಿಸಲಾಗಿದೆ. ಅದರಂತೆ ತ್ವರಿತಗತಿಯಲ್ಲಿ ಕೆಲಸ ನಿರ್ವಹಿಸಲು ಎಲ್ಲಾ ತಾಲೂಕು ಭೂಮಾಪನ ಕಚೇರಿಗಳಲ್ಲಿ (ಮಿನಿ ವಿಧಾನ ಸೌಧ ಕಟ್ಟಡದಲ್ಲಿ) ಹಾಗೂ ಮಂಗಳೂರು ನಗರ ಮಾಪನ ಕಚೇರಿಯಲ್ಲಿ ಭೂಮಾಪನ ಸಿಬ್ಬಂದಿ ವರ್ಗವು ಅಳತೆ ಕೆಲಸದ ಜೊತೆಗೆ ಈ ಕಾರ್ಯವನ್ನು ನಿರ್ವಹಿಸುತ್ತಿದ್ದಾರೆ. ಅಲ್ಲದೆ ನಿಗದಿತ ಗುರಿ ಸಾಧಿಸಲು ಸರಕಾರಿ ರಜೆ ದಿನಗಳಲ್ಲಿ ಹಾಗೂ ಪುರುಷ ಭೂಮಾಪನ ಸಿಬ್ಬಂದಿಯು ರಾತ್ರಿ ಪಾಳಿಯಲ್ಲೂ ಕಾರ್ಯ ನಿರ್ವಹಿಸುತ್ತಿದ್ದಾರೆ. ಜಿಲ್ಲೆಯ ಎಲ್ಲಾ ಗ್ರಾಮಗಳ ಆಕಾರಬಂದ್ ಗಣಕೀಕೃತ ಕೆಲಸವು ನವೆಂಬರ್ ಅಂತ್ಯದೊಳಗೆ ಪೂರ್ಣಗೊಳ್ಳಲಿದೆ ಎಂದು ತಿಳಿಸಿದ್ದಾರೆ.





