ಕುಮಾರಸ್ವಾಮಿಯಂಥ ಪೆದ್ದ ಯಾರೂ ಇಲ್ಲ: ವಿಪಕ್ಷ ನಾಯಕ ಸಿದ್ದರಾಮಯ್ಯ

ಫೈಲ್ ಚಿತ್ರ
ತುಮಕೂರು, ಅ.7: ಜೆಡಿಎಸ್ ಮೈಸೂರು ಭಾಗದಲ್ಲಿ ಮಾತ್ರ ಸೀಮಿತವಾದ ಪಕ್ಷ. ಹಾಗಾಗಿ ಈ ಬಾರಿ ಶಿರಾ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲುವುದು ನೂರರಷ್ಟು ಖಚಿತ. ಬಿಜೆಪಿಯ ರಾಜೇಶ್ ಗೌಡ ಮತ್ತು ನನ್ನ ಮಗ ಯತೀಂದ್ರ ಸ್ನೇಹಿತರು. ನನಗೆ ಹೇಗೆ ಸ್ನೇಹಿತ ಆಗಲು ಸಾಧ್ಯ. ಕುಮಾರಸ್ವಾಮಿಯಂಥ ಪೆದ್ದ ಯಾರೂ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವ್ಯಂಗ್ಯವಾಡಿದರು.
ತುಮಕೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನನ್ನ ವಯಸ್ಸು, ರಾಜೇಶ್ ಗೌಡನ ವಯಸ್ಸು ವ್ಯತ್ಯಾಸವಿಲ್ಲವೇ? ಅದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಗೆ ಗೊತ್ತಿಲ್ಲವೇ? ಮಾಜಿ ಮುಖ್ಯಮಂತ್ರಿ ಜವಾಬ್ದಾರಿಯಿಂದ ಮಾತನಾಡಬೇಕು. ರಾಜಕೀಯ ಬೇರೆ, ಸ್ನೇಹ ಬೇರೆ. ಬೇಜವಾಬ್ದಾರಿ ಮಾತುಗಳು ಶೋಭೆ ತರುವುದಿಲ್ಲ ಎಂದು ಹೇಳಿದರು.
ಮಾಜಿ ಸಂಸದ ಮೂಡ್ಲಗಿರಿಯಪ್ಪ ಅವರು ಕುಮಾರಸ್ವಾಮಿ ಅವರಿಗೆ ಚೆನ್ನಾಗಿ ಗೊತ್ತು. ಅವರೇ ಹೇಳಿ ರಾಜೇಶ್ ಗೌಡನನ್ನು ಕಣಕ್ಕೆ ಇಳಿಸಿರಬಹುದಲ್ಲ ಎಂದು ಮಾಧ್ಯಮದವರಿಗೆ ಪ್ರಶ್ನೆ ಹಾಕಿದರು.
ಕಾಂಗ್ರೆಸ್ಗೆ ಸಿದ್ದರಾಮಯ್ಯ ಕೊನೆ ಮೊಳೆ ಹೊಡೆಯುತ್ತಾರೆ ಎಂಬ ಕುಮಾರಸ್ವಾಮಿ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಅದೊಂದು ಬೇಜವಾಬ್ದಾರಿ ಹೇಳಿಕೆ, ಅವರು ನೀಡುವ ಎಲ್ಲಾ ಹೇಳಿಕೆಗಳಿಗೂ ಪ್ರತಿಕ್ರಿಯೆ ಮಾಡಬೇಕಾದ ಅಗತ್ಯವಿಲ್ಲ ಎಂದು ತಿಳಿಸಿದರು.
ಜೆಡಿಎಸ್ ಮೈಸೂರು ಭಾಗದಲ್ಲಿ ಮಾತ್ರ ಸೀಮಿತವಾದ ಪಕ್ಷ. ಹಾಗಾಗಿ ಈ ಬಾರಿ ಶಿರಾ ಉಪಚುನಾವಣೆ ಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲುವುದು ನೂರರಷ್ಟು ಖಚಿತ. ಹಿಂದೆ ಅಪಪ್ರಚಾರ ನಡೆಸಿದ್ದರಿಂದ ಜಾತಿಯ ಮೇಲಾಟ ಆಗಿ ಜಯಚಂದ್ರ ಸೋತರು. ಈ ಬಾರಿ ಎಲ್ಲಾ ನಾಯಕರು ಒಗ್ಗೂಡಿ ಶಿರಾ ಕ್ಷೇತ್ರದಲ್ಲಿ ಪ್ರಚಾರ ನಡೆಸಲಿದ್ದಾರೆ ಎಂದು ಸ್ಪಷ್ಟಪಡಿಸಿದರು.
ನಾನು ಕೂಡ ನಾಲ್ಕು ದಿನಗಳ ಕಾಲ ತುಮಕೂರಿನಲ್ಲಿ ಉಳಿದುಕೊಳ್ಳುತ್ತೇನೆ. ಶಿರಾ ಕ್ಷೇತ್ರದಲ್ಲಿ ಪ್ರಚಾರ ನಡೆಸುತ್ತೇನೆ. ಜೊತೆಗೆ ಡಾ. ಜಿ.ಪರಮೇಶ್ವರ್, ಕೆ.ಎನ್.ರಾಜಣ್ಣ, ಮುದ್ದಹನುಮೇಗೌಡ ಸೇರಿದಂತೆ ಎಲ್ಲಾ ಮುಖಂಡರು ಪ್ರಚಾರ ಕಾರ್ಯದಲ್ಲಿ ತೊಡಗುತ್ತಾರೆ. ಹಿಂದೆ ಅವರವರ ಕ್ಷೇತ್ರದಲ್ಲಿ ಬ್ಯುಸಿಯಾಗಿದ್ದರು. ಈಗ ಎಲ್ಲರೂ ಚುನಾವಣಾ ಪ್ರಚಾರದಲ್ಲಿ ಭಾಗವಹಿಸುತ್ತಾರೆ ಎಂದು ತಿಳಿಸಿದರು.
ಬಿಜೆಪಿ ಯಾವುದೇ ಕಾರ್ಯಕ್ರಮಗಳನ್ನು ರೂಪಿಸಿಲ್ಲ. ಅಭಿವೃದ್ಧಿ ಕಾರ್ಯಗಳನ್ನು ಮಾಡಿಲ್ಲ. ನಮ್ಮ ಕಾಲದಲ್ಲಿ ಆದ ಅನ್ನಭಾಗ್ಯ, ಶೂ ಭಾಗ್ಯ, ಕುಟೀರ ಭಾಗ್ಯ, ಎಲ್ಲ ಕಾರ್ಯಕ್ರಮಗಳು ಅನುಷ್ಠಾನಕ್ಕೆ ತಂದೆವು. ಆದರೆ ಬಿಜೆಪಿ ಸರ್ಕಾರದಲ್ಲಿ ಒಂದು ಕೆಲಸವೂ ಆಗುತ್ತಿಲ್ಲ. ಬಿಜೆಪಿ ಶಿರಾ ಕ್ಷೇತ್ರಕ್ಕೆ ಯಾವುದೇ ಕೊಡುಗೆ ನೀಡಿಲ್ಲ ಎಂದು ಆರೋಪಿಸಿದರು.
ಯಡಿಯೂರಪ್ಪ ಸರ್ಕಾರದಲ್ಲಿ ರಸ್ತೆ ಅಭಿವೃದ್ಧಿ ಆಗಿಲ್ಲ. ನೀರಾವರಿಗೆ ಹಣ ನೀಡಿಲ್ಲ. ನೌಕರರಿಗೆ ಸಂಬಳ ನೀಡಲು ದುಡ್ಡಿಲ್ಲ. ಶಿರಾ ಕ್ಷೇತ್ರದ ಅಭಿವೃದ್ಧಿಗೂ ಹಣ ನೀಡಿಲ್ಲ. ಟಿ.ಬಿ.ಜಯಚಂದ್ರ ಅವಧಿಯಲ್ಲಿ ಅಭಿವೃದ್ಧಿ ಕೆಲಸಗಳು ಆಗಿವೆ. ಅದನ್ನೇ ಮುಂದಿಟ್ಟುಕೊಂಡು ಮತ ಯಾಚಿಸುತ್ತೇವೆ ಎಂದರು.
ಜಾತಿಗಳ ಸಮೀಕ್ಷೆಯಿಂದ ಅವರ ಸಾಮಾಜಿಕ ಆರ್ಥಿಕ, ರಾಜಕೀಯ ಮತ್ತು ಔದ್ಯೋಗಿ ಸ್ಥಿತಿಗತಿಗಳು ತಿಳಿಯುತ್ತದೆ. ಆಗ ಕಾರ್ಯಕ್ರಮಗಳನ್ನು ರೂಪಿಸಲು ಸಹಕಾರಿಯಾಗುತ್ತದೆ. ಅಧಿಕಾರ ಹಂಚಿಕೆಗೂ ಅನುಕೂಲವಾಗುತ್ತದೆ. ಹಾಗಾಗಿ ಜಾತಿ ಸಮೀಕ್ಷೆ ಮಾಡಲಾಯಿತು. ಜಾತಿ ಸಮೀಕ್ಷಾ ವರದಿ ನಾನು ಮುಖ್ಯಮಂತ್ರಿ ಆಗಿದ್ದಾಗ ಪೂರ್ಣಗೊಂಡಿರಲಿಲ್ಲ. ಹಾಗಾಗಿ ಅದನ್ನು ಜಾರಿ ಮಾಡಲು ಆಗಲಿಲ್ಲ ಎಂದರು.
ಜೆಡಿಎಸ್ ಮತ್ತು ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ರಚನೆಯಾದಾಗ ವರದಿ ಪೂರ್ಣವಾಯಿತು. ಮುಖ್ಯಮಂತ್ರಿ ಕುಮಾರಸ್ವಾಮಿ ಅದನ್ನು ತೆಗೆದುಕೊಳ್ಳಲಿಲ್ಲ. ಬಿಜೆಪಿಯ ಯಡಿಯೂರಪ್ಪನವರೂ ಅದರ ಬಗ್ಗೆ ಗಮನಹರಿಸಲಿಲ್ಲ. ಆದರೆ ಜಾತಿ ಸಮೀಕ್ಷೆ ನಡೆಸುತ್ತಿದ್ದ ಅಧ್ಯಕ್ಷರನ್ನೇ ವಜಾ ಮಾಡಿದರು. ಹಾಗಾಗಿ ಅವರ ವರದಿಯನ್ನು ಕಾರ್ಯದರ್ಶಿಗಳಿಗೆ ನೀಡಿ ಹೋದರು ಎಂದು ಹೇಳಿದರು.







