ಬಂಟ್ವಾಳ: ಮನೆಗೆ ನುಗ್ಗಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳವು
ಬಂಟ್ವಾಳ, ಅ.7: ಬಾಗಿಲಿನ ಚಿಲಕ ಮುರಿದು ಮನೆಯೊಳಗೆ ನುಗ್ಗಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣಗಳನ್ನು ಕಳವುಗೈದ ಘಟನೆ ಕಲ್ಲಡ್ಕ ಕರಿಂಗಾನ ಸಮೀಪದ ಅಮ್ಟೂರು ಮಸೀದಿ ಬಳಿ ಮಂಗಳವಾರ ರಾತ್ರಿ ನಡೆದಿದೆ.
ಅಮ್ಟೂರು ನಿವಾಸಿ ಸುಲೈಮಾನ್ ಎಂಬವರ ಮನೆಯಲ್ಲಿ ಈ ಕಳ್ಳತನ ಪ್ರಕರಣ ನಡೆದಿದ್ದು ಸುಮಾರು 12 ಲಕ್ಷ ರೂ. ಮೌಲ್ಯದ 28 ಪವನ್ ಚಿನ್ನಾಭರಣಗಳು ಕಳವಾಗಿದೆ ಎಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ಆರೋಪಿಸಲಾಗಿದೆ.
ಸುಲೈಮಾನ್ ಅವರ ಮಗಳು ಮಿಶ್ರಿಯಾ ಎಂಬವರನ್ನು ಕಬಕ ಸಮೀಪದ ಪೋಳ್ಯ ಎಂಬಲ್ಲಿಗೆ ಮದುವೆಯಾಗಿದ್ದು ಗಂಡನ ಮನೆಯಿಂದ ಕೆಲವು ದಿನಗಳ ಹಿಂದೆ ಅಮ್ಟೂರಿಗೆ ಬಂದಿದ್ದ ಮಿಶ್ರಿಯಾಳ 28 ಪವನ್ ಚಿನ್ನಾಭರಣ ಮನೆಯ ಕೋಣೆಯ ಕಪಾಟಿನಲ್ಲಿ ಇಡಲಾಗಿತ್ತು ಎಂದು ಪೊಲೀಸ್ ದೂರಿನಲ್ಲಿ ತಿಳಿಸಲಾಗಿದೆ.
ಚಿನ್ನಾಭರಣ ಇದ್ದ ಕೋಣೆಯಲ್ಲಿ ಮಕ್ಕಳು ಮಲಗಿದ್ದರು. ಮಧ್ಯರಾತ್ರಿ 2 ಗಂಟೆಯ ವೇಳೆ ಮನೆಯ ಹಿಂಬದಿಯಲ್ಲಿ ಬಾಗಿಲಿನ ಶಬ್ದವಾಗಿದ್ದು ಈ ವೇಳೆ ಎಚ್ಚರಗೊಂಡ ಸುಲೈಮಾನ್ ಎದ್ದು ಪರಿಶೀಲಿಸಿದಾಗ ಮನೆಯ ಹಿಂಬದಿಯ ಬಾಗಿಲು ತೆರೆದಿತ್ತು. ಮನೆಯ ಕೋಣೆಯಲ್ಲಿದ್ದ ಕಪಾಟಿನ ಬಾಗಿಲು ಕೂಡಾ ತೆರೆದು ಚಿನ್ನಾಭರಣ ಕಳವಾಗಿತ್ತು ಎಂದು ದೂರಲಾಗಿದೆ.
ಮಧ್ಯ ರಾತ್ರಿಯೇ ಮನೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದು ಘಟನಾ ಸ್ಥಳಕ್ಕೆ ಬಂಟ್ವಾಳ ಎಸ್ಸೈ ಅವಿನಾಶ್ ಹಾಗೂ ಸಿಬ್ಬಂದಿ, ಶ್ವಾನದಳ, ಬೆರಳಚ್ಚು ತಜ್ಞರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.







