ವಿದ್ಯುತ್ ಶಾಕ್ ಹೊಡೆದು ಕಾರ್ಮಿಕ ಮೃತ್ಯು
ಬಂಟ್ವಾಳ, ಅ. 7: ವಿದ್ಯುತ್ ತಗುಲಿ ಕೂಲಿ ಕಾರ್ಮಿಕರೋರ್ವರು ಮೃತಪಟ್ಟ ಘಟನೆ ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ದೇವಸ್ಯ ಎಂಬಲ್ಲಿ ನಡೆದಿದೆ.
ಕರೋಪಾಡಿ ಗ್ರಾಮದ ಚೆಲ್ಲಂಗಾರು ನಿವಾಸಿ ಗೋವಿಂದ ನಾಯ್ಕರ ಪುತ್ರ, ಮಂಗಿಲಪದವಿನಲ್ಲಿ ಬಾಡಿಗೆ ಮನೆಯಲ್ಲಿ ವಾಸವಿರುವ ವಿಶ್ವನಾಥ (36) ಮೃತ ಕಾರ್ಮಿಕ.
ವಿಶ್ವಾನಾಥರವರು ಕೆಲವು ಸಮಯಗಳಿಂದ ವಿಟ್ಲ ಕಸಬ ಗ್ರಾಮದ ದೇವಸ್ಯ ಎಂಬಲ್ಲಿನ ಅಶ್ವತ್ ರವರ ತೋಟದಲ್ಲಿ ಕೆಲಸ ಮಾಡಿಕೊಂಡಿದ್ದರು. ಅ.6ರಂದು ರಾತ್ರಿ ವಿಶ್ವನಾಥರವರು ಅಶ್ವತ್ ರವರ ತೋಟದ ಪಂಪ್ ಶೆಡ್ ನಲ್ಲಿ ಮೋಟರ್ ಸ್ವಿಚ್ ಹಾಕಲೆಂದು ತೆರಳಿದ್ದು ಪಂಪ್ ಶೆಡ್ ಗೆ ವಿದ್ಯುತ್ ಬಾರದ ಹಿನ್ನೆಲೆಯಲ್ಲಿ ಪಕ್ಕದಲ್ಲಿದ್ದ ವಿದ್ಯುತ್ ಕಂಬದ ತಂತಿಯನ್ನು ಬಿದಿರಿನ ಕೋಲಿನಿಂದ ಸರಿಪಡಿಸುತ್ತಿದ್ದ ವೇಳೆ ವಿದ್ಯುತ್ ತಗುಲಿ ಗಂಭೀರ ಗಾಯಗೊಂಡಿದ್ದರು. ಬಳಿಕ ಅವರನ್ನು ವಿಟ್ಲದ ಸರಕಾರಿ ಆಸ್ಪತ್ರೆಗೆ ಕರೆತಂದು ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಪುತ್ತೂರಿನ ಸರಕಾರಿ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ ದಾರಿ ಮಧ್ಯೆ ಅವರು ಮೃತಪಟ್ಟಿರುವುದಾಗಿ ಮೃತರ ಸಹೋದರ ವಸಂತ ನಾಯ್ಕರವರು ವಿಟ್ಲ ಠಾಣೆ ಪೊಲೀಸರಿಗೆ ನೀಡಿದ ದೂರಿನಲ್ಲಿ ವಿವರಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





